ಸುದ್ದಿ360 ದಾವಣಗೆರೆ, ಆ.2: ನಗರದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮ ಸಿದ್ದರಾಮಯ್ಯ ಅವರಿಗಾಗಿ ಮಾಡುತ್ತಿರುವ ಕಾರ್ಯಕ್ರಮವಲ್ಲ. ಕಾಂಗ್ರೆಸ್ ಪಕ್ಷದಿಂದ ಈ ಹಿಂದೆ ಹಲವು ಬೃಹತ್ ಸಮಾವೇಶಗಳು ನಡೆದಿವೆ. ಇದು ಪಕ್ಷದ ಸಂಘಟನೆಗೆ ಸಾಂದರ್ಭಿಕವಾಗಿ ಒದಗಿಬಂದಿರುವ ಒಂದು ವಿಶೇಷ ಅವಕಾಶ ಎಂದು ಎಚ್.ಎಂ. ರೇವಣ್ಣ ಹೇಳಿದರು.
ಅವರು ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಮಾರಂಭದ ಸಿದ್ಧತೆ ಕುರಿತು ಮಾಹಿತಿ ನೀಡಿ, ಒಬ್ಬ ಸಮಾಜಮುಖಿ ಜನಪ್ರತಿನಿಧಿಯಾಗಿ ಸಿದ್ದರಾಮಯ್ಯ 40 ವರ್ಷಗಳಿಗೂ ಅಧಿಕ ಕಾಲ ರಾಜಕೀಯ ಜೀವನದಲ್ಲಿದ್ದಾರೆ. ಅವರ 75ನೇ ಜನ್ಮ ದಿನದ ಅಂಗವಾಗಿ ನಡೆಸುತ್ತಿರುವ ಅಮೃತ ಮಹೋತ್ಸವ ಪಕ್ಷದ ಸಂಘಟನೆಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಬರೋದು ಗ್ಯಾರಂಟಿ
ಯಾರು ಏನೇ ಹೇಳಿದರೂ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಬಂದೇ ಬರುತ್ತಾರೆ ಎಂದು ಎಚ್.ಎಂ. ರೇವಣ್ಣ ಸ್ಪಷ್ಟವಾಗಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ವೀರಪ್ಪ ಮೊಯ್ಲಿ, ಪರಮೇಶ್ವರ್, ದೇಶಪಾಂಡೆ ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿ ಪದಾಧಿಕಾರಿಗಳಾದ ಅಶೋಕ್, ಅಪ್ಪಾಜಿ ನಾಡಗೌಡ, ಪ್ರಕಾಶ್ ರಾಥೋಡ್, ರಾಜ್ಯ ಕುರುಬ ಸಂಘದ ಅಧ್ಯಕ್ಷ ಸುಬ್ಬಣ್ಣ, ರಾಜ್ಯ ಹಿಂದುಳಿದ ಜಾತಿಗಳ ಒಟ್ಟೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಇತರರು ಇದ್ದರು.