ಕೋವಿಡ್ ಎದುರಿಸಲು ದಾವಣಗೆರೆ ಜಿಲ್ಲೆ ಸನ್ನದ್ದ – ಅಧಿಕಾರಿಗಳು ಹೇಳಿದ್ದೇನು?

ಸುದ್ದಿ360 ದಾವಣಗೆರೆ ಡಿ.27: ಕೋವಿಡ್ ತವರು ರಾಷ್ಟ್ರ ಚೀನಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೋವಿಡ್ 19ರ ರೂಪಾಂತರಿ ತಳಿ ಬಿಎಫ್-7 ವ್ಯಾಪಕವಾಗಿ ಹರಡುತ್ತಿರುವ ಮುನ್ಸೂಚನೆಯಿಂದ ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳು ಕೋವಿಡ್ ನ್ನು ಸಮರ್ಥವಾಗಿ ಎದುರಿಸಲು ಶಸ್ತ್ರಸಜ್ಜಿತವಾಗತೊಡಗಿವೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೂಡ ಮಂಗಳವಾರ ಸಿದ್ಧತೆಗಳ ಅಣಕು ತಾಲೀಮು ನಡೆಸಲಾಯಿತು.

ಸರಕಾರಿ ಆಸ್ಪತ್ರೆಗಳಲ್ಲಿನ ಕೋವಿಡ್ ಸಂಬಂಧಿಸಿದ ಸೌಲಭ್ಯಗಳ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ಕೇಳಿ ಪಡೆಯಲಾಯಿತು. ಅದರಂತೆ ದಾವಣಗೆರೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಜಿಲ್ಲಾ ಸರ್ಜನ್ ಡಾ. ಷಣ್ಮುಖಪ್ಪ ಹಾಗೂ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ಸಿದ್ಧತೆಗಳ ಅಣಕು ತಾಲೀಮು ನಡೆಯಿತು.

ಕೋವಿಡ್ ಎದುರಿಸಲು ಸರಕಾರಿ ಆಸ್ಪತ್ರೆಗಳಲ್ಲಿನ ಸಿದ್ಧತೆ, ಸಾಮರ್ಥ್ಯಗಳ ಕುರಿತು ಮಾಹಿತಿ ಪಡೆಯುವ ಉದ್ದೇಶದಿಂದ ಕೈಗೊಂಡ ತಾಲೀಮಿನಲ್ಲಿ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿನ ಐಸಿಯು ಬೆಡ್‌ಗಳು, ಆಕ್ಸಿಜನ್ ಸಿಲಿಂಡರ್ ಲಭ್ಯತೆ ಮತ್ತು ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ಥಿತಿಗತಿ, ಕೋವಿಡ್ ರೋಗಿಗಳಿಗೆ ಎಷ್ಟು ಹಾಸಿಗೆಗಳು ಮೀಸಲಾಗಿವೆ, ಆಸ್ಪತ್ರೆಗಳ ಆಕ್ಸಿಜನ್ ಲೈನ್ ಹೇಗಿದೆ ಎಂಬುದೂ ಒಳಗೊಂಡಂತೆ  ಇನ್ನೂ ಹಲವು ಮಾಹಿತಿಗಳನ್ನು ಆನ್‌ಲೈನ್ ಪೋರ್ಟಲ್ ಮೂಲಕ ಕಲೆ ಹಾಕಲಾಗುತ್ತಿದೆ.

100 ಹಾಸಿಗೆ ಕೋವಿಡ್ ರೋಗಿಗಳಿಗೆ ಮೀಸಲು

ಪ್ರಸ್ತುತ 930 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 600 ಆಕ್ಸಿಜನ್ ಬೆಡ್‌ಗಳಿವೆ. ಈ ಪೈಕಿ 50 ಆಕ್ಸಿಜನ್ ಬೆಡ್‌ಗಳು, 10 ಐಸಿಯು ಬೆಡ್ ಹಾಗೂ 5 ವೆಂಟಿಲೇಟರ್ ಬೆಡ್‌ಗಳು ಮತ್ತು 35 ಸಾಮಾನ್ಯ ಆಕ್ಸಿಜನ್ ಬೆಡ್ ಸೇರಿ ಒಟ್ಟು 100 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಮುಂದೆ ರೋಗಿಗಳ ಸಂಖ್ಯೆ ಹೆಚ್ಚಾಗಿ ಅಗತ್ಯಬಿದ್ದರೆ ಹಂತಹಂತವಾಗಿ ಈ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಷಣ್ಮುಖಪ್ಪ ಮಾಹಿತಿ ನೀಡಿದ್ದಾರೆ.

ಬೂಸ್ಟರ್ ಡೋಸ್‌ಗೆ ನಿರ್ಲಕ್ಷ್ಯ

ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣ ಮರೆಯಾಗಿರುವ ಕಾರಣ ಸಾರ್ವಜನಿಕರು ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರಗಳಿಗೆ ಬರುತ್ತಿಲ್ಲ. ಎರಡನೇ ಅಲೆ ಕಡೆಯ ದಿನಗಳಲ್ಲಿ ಬೂಸ್ಟರ್ ಡೋಸ್ ಪಡೆಯಲು ಆಸ್ಪತ್ರೆಗಳಲ್ಲಿ ಕಾಣುತ್ತಿದ್ದ ನೂಕು ನುಗ್ಗಲು ಈಗಿಲ್ಲ. ದಿನಕ್ಕೆ 15ರಿಂದ 20 ಮಂದಿ ವ್ಯಾಕ್ಸಿನ್ ಪಡೆದರೆ ಹೆಚ್ಚು. ಹೀಗಾಗಿ ಜಿಲ್ಲೆಯಾದ್ಯಂತ ಮೂರನೇ ಡೋಸ್ ಪಡೆದವರ ಪ್ರಮಾಣ ಕೇವಲ ಶೇ.24ರಷ್ಟಿದೆ ಎಂಬುದು ವೈದ್ಯರ ಅಭಿಪ್ರಾಯ.

ಜಿಲ್ಲೆಯಲ್ಲಿ ನ.23ರಂದು ಕೋವಿಡ್ ಕೊನೆಯ ಪ್ರಕರಣ ವರದಿಯಾಗಿದ್ದು, ನ.30ರಂದು ರೋಗಿ ಗುಣಮುಖರಾಗಿದ್ದರು. ನಂತರ ಕೋವಿಡ್ ಪ್ರಕರಣ ಪತ್ತೆಯಾಗಿರುವುದಿ್ಲ.  ಜಿಲ್ಲೆಯಲ್ಲಿ ಬಿಎಫ್-7 ರೂಪಾಂತರಿಯ ಆತಂಕ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.  ಹಾಗೆಯೇ ಆಸ್ಪತ್ರೆಯಲ್ಲಿ ಎಂದಿನಂತೆ ಕೊರೊನೇತರ ರೋಗಿಗಳಿಗೆ ಬೇರೆಲ್ಲಾ ಆರೋಗ್ಯ ಸೇವೆಗಳು ಲಭ್ಯವಿರಲಿವೆ. ಜತೆಗೆ, ಕೋವಿಡ್ ಲಸಿಕೆ, ಬೂಸ್ಟರ್ ಲಸಿಕೆ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ. ಡಾ. ಷಣ್ಮುಖಪ್ಪ ತಿಳಿಸಿದರು.

ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ 927 ಆಕ್ಸಿಜನ್ ಬೆಡ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1088 ಹಾಸಿಗೆಗಳು ಲಭ್ಯವಿವೆ. ಈಗಾಗಲೆ ಅಗತ್ಯ 36 ವಿಧದ ಔಷಧಗಳನ್ನು ಶೇಖರಿಸಿ ಇರಿಸಿದ್ದು, ಸಾರ್ವಜನಿಕರು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ರೋಗ ಲಕ್ಷಣ ಹೊಂದಿರುವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

– ಶಿವಾನಂದ ಕಾಪಶಿ, ಜಿಲ್ಲಾಧಿಕಾರಿ

ಪ್ರಸ್ತುತ ನಮ್ಮ ಬಳಿ 8140 ಕೋವ್ಯಾಕ್ಸಿನ್ ಡೋಸ್‌ಗಳು ಲಭ್ಯವಿವೆ. ಕೋವಿಶೀಲ್ಡ್ ಸ್ಟಾಕ್ ಇಲ್ಲ. ಹೀಗಾಗಿ ಮೊದಲ ಹಾಗೂ ಎರಡನೇ ಡೋಸ್ ಕೋವ್ಯಾಕ್ಸಿನ್ ಪಡೆದು ಆರು ತಿಂಗಳು ಪೂರೈಸಿರುವ ವಯಸ್ಕರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಕೋವಿಶೀಲ್ಡ್ ಪೂರೈಕೆಯಾದ ಬಳಿಕ ಅರ್ಹರಿಗೆ ಆದ್ಯತೆ ಮೇರೆಗೆ ಬೂಸ್ಟರ್ ಡೋಸ್ ನೀಡಲಾಗುವದು.

-ಡಾ. ಮೀನಾಕ್ಷಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ.

ಹೊಸ ವರ್ಷದ ಆಚರಣೆ ಬೆಳಗಿನಜಾವ 1 ಗಂಟೆಗೆ ಮುಕ್ತಾಯವಾಗಬೇಕು. 60 ವರ್ಷ ಮೇಲ್ಪಟ್ಟ ನಾಗರಿಕರು ಪಾರ್ಟಿ ಅಥವಾ ಹೆಚ್ಚು ಜನ ಸೇರುವ ಇನ್ನಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸಬಾರದು. ಹೋಟೆಲ್ ಸಿಬ್ಬಂದಿ ಬೂಸ್ಟರ್ ಡೋಸ್ ಪಡೆಯಬೇಕು. ಸುರಕ್ಷತೆ ದೃಷ್ಟಿಯಿಂದ ಜನತೆ ಮಾಸ್ಕ್ ಧರಿಸಬೇಕು.

– ಸಿ.ಬಿ. ರಿಷ್ಯಂತ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ.

admin

admin

Leave a Reply

Your email address will not be published. Required fields are marked *

error: Content is protected !!