ಸುದ್ದಿ360 ದಾವಣಗೆರೆ: ದೇವನಗರಿ ದಾವಣಗೆರೆಗೆ ಬರುವ ಪ್ರವಾಸಿಗರು ಗ್ಲಾಸ್ ಹೌಸ್ ನೋಡದಿದ್ದರೆ ಪ್ರವಾಸ ಪೂರ್ಣವಾಗುವುದಿಲ್ಲ. ಅಂತೆಯೇ ಇಲ್ಲಿ ಯಾರಿಗಾದರೂ ವಾಯುವಿಹಾರ ಮತ್ತು ಮನಸ್ಸಿಗೆ ಮುದ ನೀಡುವ ಜಾಗ ಹೇಳಿ ಎಂದರೆ ಥಟ್ ಅಂತ ಬರುವ ಮೊದಲ ಉತ್ತರ ಗ್ಲಾಸ್ ಹೌಸ್. ಹೀಗಿದ್ದರೂ ಗಾಜಿನ ಮನೆ ಸಂಪರ್ಕಿಸುವ ರಸ್ತೆ ಕಾಮಗಾರಿಯಿಂದಾಗಿ ಪ್ರವಾಸಿಗರಿಂದ ದೂರ ಸರಿದಿದೆ.
ಗಾಜಿನ ಮನೆಗೆಂದು ಆಗಮಿಸುವ ಪ್ರವಾಸಿಗರು ನೋಡು ಗಾಜಿನ ಮನೆ ಕಾಣಿಸುತ್ತಿದೆ. ಇನ್ನೇನು ಬಂದೇಬಿಟ್ಟೆವು ಎಂದು ಖುಷಿಯಾಗುತ್ತಿದ್ದಂತೆ ಅಗೆದು ಹಾಕಿರುವ ರಸ್ತೆ ದುತ್ತೆಂದು ಎದುರಾಗುತ್ತದೆ. ಇವರಿಗೆ ಈ ದಾರಿ ಬಿಟ್ಟರೆ ಬೇರೆ ಯಾವ ದಾರಿ ಎಂದು ತಿಳಿಯಲು ಇಲ್ಲಿ ಯಾವ ಸೂಚನಾ ಫಲಕವೂ ಇಲ್ಲ. ಏಷ್ಯಾದ ಎರಡನೇ ಅತಿ ದೊಡ್ಡ ಗ್ಲಾಸ್ ಹೌಸ್ ಖ್ಯಾತಿಯ ಗಾಜಿನ ಮನೆಗೆ ಸಂಪರ್ಕ ಕಡಿತಗೊಂಡಿದೆ.
ಗಾಜಿನ ಮನೆ ಸಂಪರ್ಕಿಸುವ ರಸ್ತೆ ಅಗೆದು ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರವಾಸಿಗರು ಅರ್ಧ ದಾರಿಯಲ್ಲೇ ನಿಂತು ದಾರಿಯಾವುದು ಎಂದು ಹುಡುಕಾಡುವಂತಾಗಿದೆ. ಆ ರಸ್ತೆ ಬಿಟ್ಟು ಬೇರಾವ ರಸ್ತೆಯಲ್ಲಿ ಹೋಗಬೇಕೆಂದು ತಿಳಿಸುವ ಮಾಹಿತಿ ಫಲಕವೂ ಇಲ್ಲಿ ಲಭ್ಯವಿಲ್ಲದ ಕಾರಣ ಪ್ರವಾಸಿಗರು ರಸ್ತೆ ಹುಡುಕಾಡುವುದರಲ್ಲಿ ಹೈರಾಣಾಗುತ್ತಿದ್ದಾರೆ.
ನಗರದ ಶಾಮನೂರು ರಸ್ತೆಯಲ್ಲಿನ ಬಾಟಲ್ ಬಿಲ್ಡಿಂಗ್ ಪಕ್ಕದಲ್ಲಿರುವ ರಸ್ತೆಯೊಂದೇ ಗಾಜಿನ ಮನೆಯನ್ನು ಸಂಪರ್ಕಿಸಲು ಇರುವ ಏಕೈಕ ಮಾರ್ಗ. ಈ ಮಾರ್ಗದಲ್ಲಿ ಸಾಗುವ ಪ್ರವಾಸಿಗ ಒಂದು ಕಿ.ಮೀ. ಸಾಗುತ್ತಿದ್ದಂತೆ ಅಗೆದು ಹಾಕಲಾಗಿರುವ ರಸ್ತೆಯಿಂದ ಮುಂದೆ ಹೇಗೆ ಹೋಗಬೇಕು ಎಂದು ತಿಳಿಯದಾಗುತ್ತಾನೆ. ಹೀಗಾಗಿ ಸುಮಾರು ಮುಕ್ಕಾಲು ಕಿ.ಮೀ (೭೫೦-೮೦೦ ಮೀಟರ್) ದೂರದಲ್ಲಿ ವಾಹನ ನಿಲ್ಲಿಸಿ ಗ್ಲಾಸ್‌ಹೌಸ್‌ವರೆಗೂ ನಡೆದು ಹೋಗುತ್ತಾರೆ. ಮತ್ತೆ ಕೆಲವರು ಅಕ್ಕ-ಪಕ್ಕದ ರಸ್ತೆಗಳಲ್ಲಿ ಮಾರ್ಗ ಹುಡುಕಿ ಸುಸ್ತಾಗಿ ಕೊನೆಗೆ ಮನೆಗೆ ಮರಳುತ್ತಾರೆ. ತಿಂಗಳಾದರೂ ಗಾಜಿನ ಮನೆ ತಲುಪುವ ಪರ್ಯಾಯ ಮಾರ್ಗದ ಕುರಿತಾಗಿ ಸೂಚನಾಫಲಕ ಹಾಕುವ ಗೋಜಿಗೆ ತೋಟಗಾರಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೋಗಿಲ್ಲ.
ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಕೇಳಿದರೆ, ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರೈಸುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಇದು ಆರು ತಿಂಗಳ ಅವಧಿಯ ಟೆಂಡರ್ ಎಂದು ತಿಳಿದುಬಂದಿದೆ. ಹೀಗಾಗಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಕೋರಲಾಗಿದೆ ಎನ್ನುತ್ತಾರೆ. ಕೆಲ ದಿನಗಳಿಂದ ಮಳೆಯಾಗಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಿಂದ ನೇರವಾಗಿ ಗಾಜಿನ ಮನೆಗೆ ಸಂಪರ್ಕಿಸುವಂತೆ ರಸ್ತೆ ಅಭಿವೃದ್ಧಿ ಪಡಿಸಲು ಕೋರಲಾಗಿದ್ದು, ಇನ್ನೆರಡು ದಿನಗಳಲ್ಲಿ ರಸ್ತೆ ಸಿದ್ಧಗೊಳ್ಳಲಿದೆ. ಎಂಬುದಾಗಿ ಜಿಲ್ಲಾ ತಾಟಗಾರಿಕೆ ಉಪ ನಿರ್ದೇಶಕ ಡಾ.ಜಿ.ಸಿ. ರಾಘವೇಂದ್ರ ಪ್ರಸಾದ್ ಹೇಳಿದ್ದಾರೆ.
ಸೂಚನಾ ಫಲಕವಾದರೂ ಇರಲಿ
ಸ್ಮಾರ್ಟ್‌ಸಿಟಿಯಿಂದಾಗ ಅಭಿವೃದ್ಧಿ ಕಾಣುತ್ತಿರುವ ದಾವಣಗೆರೆ ನಗರದ ಬಹುತೇಕ ಕಡೆ ಸ್ಮಾರ್ಟ್ ಸಿಟಿ ಹಾಗೂ ಇತರೆ ಇಲಾಖೆಗಳಿಂದ ರಸ್ತೆ, ಚರಂಡಿ, ಕೇಬಲ್ ಸೇರಿದಂತೆ ಅನೇಕ ಕಾಮಗಾರಿಗಳು ನಡೆಯುತ್ತಲೇ ಇವೆ. ಅಂತೆಯೇ ರಸ್ತೆಗಳನ್ನು ಬಂದ್ ಮಾಡಿ ಕಾಮಗಾರಿ ನಡೆಸುವ ಅನಿವಾರ್ಯತೆಯೂ ಇದೆ. ಆದರೆ ಸಂಬಂಧಪಟ್ಟ ಇಲಾಖೆಯವರು ದಾರಿಹೋಕರ ನೆರವಿಗೆಂದು ಒಂದು ಪುಟ್ಟ ಸೂಚನಾಫಲಕ ಅಳವಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅನೇಕ ಬಾರಿ ವಾಹನ ಸವಾರರು ಕಾಮಗಾರಿ ನಡೆಯುವ ಸ್ಥಳದವರೆಗೂ ಬಂದು ವಾಪಸ್ ಹೋಗುತ್ತಾರೆ. ನಗರದ ಹಾಸ್ಟೆಲ್ ರಸ್ತೆಯಲ್ಲಿ ಹಲವು ತಿಂಗಳುಗಳಿಂದ ಇದೇ ಪರಿಸ್ಥಿತಿ ಇದೆ. ಕೆಲವು ಬಾರಿ ಇಂತಹ ಸ್ಥಳಗಳಲ್ಲಿ ವಾಹನ ದಟ್ಟಣೆ ಹೆಚ್ಚಿ, ಅನೇಕ ಪಡಿಪಾಟಲಿಗೆ ಕಾರಣವಾಗಿದೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ಕಾಮಗಾರಿ ನಡೆಯುವ ರಸ್ತೆಯ ಪ್ರಾರಂಭದಲ್ಲೇ ಸೂಚನಾ ಫಲಕವನ್ನು ಅಳವಡಿಸುವುದರಿಂದ ಸಾರ್ವಜನಿಕರಿಗೆ ಸೊಲ್ಪಮಟ್ಟಿಗಾದರೂ ಅನುಕೂಲವಾಗಲಿದೆ.