ಸುದ್ದಿ360 ದಾವಣಗೆರೆ, ಜು.02: ಇತ್ತೀಚೆಗೆ ಸುದ್ದಿ ವಾಹಿನಿಯೊಂದರ ಫೋನ್ ಇನ್ ಕಾರ್ಯಕ್ರಮವೊಂದರಲ್ಲಿ ಕರೆ ಮಾಡಿದ ವ್ಯಕ್ತಿ, ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದು ಹೇಳಿಕೆ ನೀಡಿದ್ದಾನೆ. ಈತನನ್ನು ಕೂಡಲೆ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆಯ ವೀರಪ್ಪ ಎಂಬ ವ್ಯಕ್ತಿ ಈ ರೀತಿಯಾಗಿ ಮಾತನಾಡಿದ್ದು, ಒಂದು ಕೋಮಿನ ವಿರುದ್ಧ ಕೀಳಾಗಿ ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಆತನನ್ನು ಪತ್ತೆಹಚ್ಚಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಸಿದ್ಧರಾಮಯ್ಯ ಸೇರಿದಂತೆ ನನಗೂ ಬೆದರಿಕೆ ಕರೆ, ಪತ್ರಗಳು ಬಂದಿದ್ದವು. ಆ ಬಗ್ಗೆ ಪೊಲೀಸರಿಗೆ ದೂರು ನೀಡಿ, ಬೆದರಿಕೆ ಹಾಕಿದವರನ್ನು ಬಂಧಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಜಿಲ್ಲಾ ಪೊಲೀಸರು ಕಿಡಿಗೇಡಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಇಂತಹ ವ್ಯಕ್ತಿಗಳು ಶಾಂತಿ ಕದಡುತ್ತಿದ್ದು, ಇದನ್ನು ಕೂಡಲೇ ತಡೆಯಬೇಕು. ಇಂತಹ ದುಷ್ಟರ ಬಗ್ಗೆ ಪೊಲೀಸರು ಮೌನ ವಹಿಸಿದರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.
ದುಷ್ಕರ್ಮಿಗಳನ್ನು ಗಲ್ಲಿಗೇರಿಸಿ
ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಅವರ ಅಂಗಡಿಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಮರಣ ದಂಡನೆಯಂತಹ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಡಿ. ಬಸವರಾಜ್ ಆಗ್ರಹಿಸಿದರು.
ನೂಪುರ್ ಶರ್ಮಾ ಹೇಳಿಕೆ ಬಿಜೆಪಿಯ ಮನಸ್ಥಿತಿಗೆ ಕೈಗನ್ನಡಿ
ಬಿಜೆಪಿಯ ಅಧಿಕೃತ ವಕ್ತಾರರಾಗಿರುವ ನೂಪುರ್ ಶರ್ಮಾರ ಹೇಳಿಕೆ ಪಕ್ಷದ ನಿಲುವನ್ನು ವ್ಯಕ್ತಪಡಿಸುತ್ತದೆ. ಶರ್ಮಾ ಹೇಳಿಕೆಯೇ ದೇಶ ಹೊತ್ತಿ ಉರಿಯಲು ಕಾರಣವೆಂದು ಛೀಮಾರಿ ಹಾಕಿದೆ. ಇದರಿಂದ ಇನ್ನಾದರೂ ಬಿಜೆಪಿ ಇನ್ನುಮುಂದಾದರೂ ಎಚ್ಚೆತ್ತುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಸೀಮಿತ ಪರಿಧಿಯಲ್ಲಿ ಮನ್ ಕೀ ಬಾತ್
47 ವರ್ಷಗಳ ಹಿಂದೆ ಗತಿಸಿಹೋದ ತುರ್ತು ಪರಿಸ್ಥಿತಿಯ ಘಟನೆಯನ್ನು ಪ್ರಧಾನಿಯವರು ವಿದೇಶ ಪ್ರವಾಸದಲ್ಲಿದ್ದಾಗ ಪ್ರಸ್ತಾಪಿಸುತ್ತಾರೆ. ಮನ್ ಕೀ ಬಾತ್ ನಲ್ಲಿ ಮಾತನಾಡುತ್ತಾರೆ. ಗುತ್ತಿಗೆದಾರರು ನೀಡಿದ 40% ಕಮೀಷನ್ ಬಗ್ಗೆ, ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡಲಿ ಪೆಟ್ಟಿನ ಬಗ್ಗೆ, ಅಧಿಕಾರ ದಾಹದ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಹಮದ್ ಜಿಕ್ರಿಯಾ, ಎಂ.ಕೆ. ಲಿಯಾಖತ್ ಅಲಿ, ನಿಟ್ಟುವಳ್ಳಿ ಪ್ರವೀಣ್, ಗಿರಿಧರ್ ಸತಾಳ್, ಎಚ್. ಹರೀಶ್, ಬಿ. ಶಿವಕುಮಾರ್, ಮುಬಾರಕ್ ಇತರರಿದ್ದರು.