ಗುರುಶಿಷ್ಯರ ಸಂಬಂಧ ಮತ್ತು ಈ ಮಣ್ಣಿನ ಆಟದ ವೈಭವ ‘ಗುರುಶಿಷ್ಯರು’

ಸುದ್ದಿ360 ದಾವಣಗೆರೆ, ಸೆ.16: ಖೋ-ಖೋ ನಮ್ಮ ಈ ಮಣ್ಣಿನಲ್ಲೇ ಹುಟ್ಟಿ ಬೆಳೆದ, ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ ಬೆಳೆದು ಬಂದಿರುವ ಆಟ. ಅಂತಹ ಆಟದ ಸೊಗಡಿನ ವೈಭವ ಕಟ್ಟಿಕೊಡುವ ಮತ್ತು ಗುರು ಶಿಷ್ಯ ಸಂಬಂಧದ ಕುರಿತಾಗಿ ಮೂಡಿಬಂದಿರುವ ಚಿತ್ರ ಗುರು ಶಿಷ್ಯರು. ಈ ಚಿತ್ರ ಸೆ.23ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಟ ಶರಣ್ ಹೇಳಿದರು.

ನಗರದ ಪಿಬಿ ರಸ್ತೆಯಲ್ಲಿನ ಹೋಟೆಲ್ ಪೂಜಾ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಗುರು ಶಿಷ್ಯರು ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಮಣ್ಣಿನ ಆಟವಾಗಿರುವ ಖೋ-ಖೋ ಇತ್ತೀಚೆಗೆ ಮರೆಯಾಗುತ್ತಿದೆ. ಜನ ಅದನ್ನು ಮರೆತೇಬಿಟ್ಟಿದ್ದಾರೆ. ಈ ಆಟ ಆಡಲು ವೇಗ, ಕೌಶಲ ಮತ್ತು ದೈಹಿಕ ಸಾಮರ್ಥ್ಯ ಎಲ್ಲವೂ ಬೇಕು ಎಂದರು. ಖೋಖೋ ಕುರಿತಾಗಿ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಮೂಡಿಬಂದಿರುವ ಚಿತ್ರ ಗುರುಶಿಷ್ಯರು ಆಗಿದೆ. ಹಾಗೂ ಪ್ರಪಂಚದಲ್ಲಿ ತಾಯಿಮಕ್ಕಳ ಸಬಂಧ ಬಿಟ್ಟರೆ ಗುರುಶಿಷ್ಯರ ಸಂಬಂಧ ಅತ್ಯಂತ ಮಹತ್ವವುಳ್ಳದ್ದಾಗಿದೆ. ಇಂತಹ ಗುರುಶಿಷ್ಯರ ಕುರಿತಾಗಿ ಇರುವ ಚಿತ್ರ ಇದಾಗಿದೆ ಎಂದು ಶರಣ್ ಹೇಳಿದರು.

ನಮ್ಮ ಚಿತ್ರದಲ್ಲಿ ನಟಿಸಿರುವ ಎಲ್ಲ ಮಕ್ಕಳಿಗೆ ಸತತ 8 ತಿಂಗಳ ಕಾಲ ಖೋ-ಖೋ ತರಬೇತಿ ನೀಡಲಾಗಿದೆ. ಆರಂಭದಲ್ಲಿ 3 ತಿಂಗಳ ತರಬೇತಿ ನೀಡುವ ಯೋಚನೆಯಿತ್ತು. ಆದರೆ ಅಷ್ಟು ಸಮಯ ಸಾಕಾಗಲಿಲ್ಲ. 8 ತಿಂಗಳ ಸುದೀರ್ಘ ತರಬೇತಿ ಪಡೆದ ಮಕ್ಕಳು ಇಂದು ವೃತ್ತಿಪರ ಕ್ಲಬ್ ಪರವಾಗಿ ಆಟವಾಡುವಷ್ಟು ನುರಿತ ಖೋ-ಖೋ ಪಟುಗಳಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದಲ್ಲಿ ಅತ್ಯಂತ ಸಹಜ ಅಭಿನಯ ಅವರಿಂದ ಬಂದಿದೆ. ನಿಜ ಹೇಳಬೇಕೆಂದರೆ ಚಿತ್ರದಲ್ಲಿ ನನಗಿಂತ ನೂರು ಪಟ್ಟು ಶ್ರಮ ಹಕಿರುವುದು ಈ ಮಕ್ಕಳು ಎಂದು ಮಕ್ಕಳು ಆಟ ಮತ್ತು ನಟನೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಚಿತ್ರದಲ್ಲಿ ಹಿರಿಯ ನಟರಾದ ದತ್ತಣ್ಣ, ಸುರೇಶ್ ಹೆಬ್ಳೀಕರ್ ನಟಿಸಿದ್ದು, ತರುಣ್ ಸುಧೀರ್ ಹಾಗೂ ಶರಣ್ ಬಂಡವಾಳ ಹೂಡಿದ್ದಾರೆ.

ದಾವಣಗೆರೆಯಲ್ಲಿನ ತಮ್ಮ ಗುರುಶಿಷ್ಯ ಸಂಬಂಧದ ಮೆಲುಕು ಹಾಕಿದ ಶರಣ್

ನನ್ನ ವೃತ್ತಿ ಜೀವನದ ಎರಡನೇ ಚಿತ್ರ ದಂಡನಾಯಕ ಚಿತ್ರೀಕರಣದ ವೇಳೆ ಇದೇ ಪೂಜಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆವು. ಆಗ ಹಿರಿಯ ನಟ ಸುಧೀರ್ ಅವರು, ನನಗೆ ಮೂರು ದಿನಗಳ ಕಾಲ ನಾಟಕವೊಂದರ ತರಬೇತಿಯನ್ನು ಇದೇ ಹೋಟೆಲ್ ನಲ್ಲಿ ನೀಡಿದ್ದರು ಎಂಬುದನ್ನು ನೆನೆದ ಶರಣ್ ಆ ಮೂರು ದಿನಗಳು ತಮ್ಮ ವೃತ್ತಿಜೀವನದಲ್ಲಿ ದೊರೆತ ಉತ್ತಮ ಪಾಠಗಳು ಎಂದು ಹೇಳಿದರು. ವೃತ್ತಿ ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ದಾವಣಗೆರೆ ರಂಗಭೂಮಿಯ ತರವರೂರು ಎಂದು ಬಣ್ಣಿಸಿದರು.

ಪಟ್ಟಣದ ಹುಡುಗಿಗೆ ಈಗ ಹಳ್ಳಿ ಪರಿಚಯ

ನಾಯಕ ನಟಿ ನಿಶ್ವಿಕಾ ನಾಯ್ಡು ಮಾತನಾಡಿ, ಇದುವರೆಗೆ ನಗರ ಕೇಂದ್ರಿತವಾದ ಪಾತ್ರಗಳಲ್ಲಿ ನಾನು ಅಭಿನಯಿಸಿದ್ದೆ. ಇದೇ ಮೊದಲ ಬಾರಿ ಗುರು ಶಿಷ್ಯರು ಚಿತ್ರದ ಮೂಲಕ ಹಳ್ಳಿ ಹುಡುಗಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಈ ಸಿನಿಮಾ ನನಗೆ ಹಳ್ಳಿಯ ವಾತಾವರಣ, ಸಂಸ್ಕೃತಿ ಪರಿಚಯಿಸಿಕೊಟ್ಟಿದೆ. ಲಂಗಾ ದಾವಣಿ ಹಾಕಿಕೊಂಡು ಸೈಕಲ್ ತುಳಿಯಲು ಆರಂಭದಲ್ಲಿ ಸ್ವಲ್ಪ ಕಷ್ಟವಾಯಿತು ಎಂದು ಹೇಳಿದರು.

ಗುರುಶಿಷ್ಯರು ಚಿತ್ರದ ಖೋ ಖೋ ಪಟುಗಳು ಈ ಬಾಲ ಕಲಾವಿದರು

ಚಿತ್ರದ ಬಾಲ ನಟರಾದ ಸಾಂಬಶಿವ, ಮಣಿಕಂಠ, ಸೂರ್ಯ, ರುದ್ರಗೌಡ, ಹರ್ಷಿರ್, ರಕ್ಷತ್, ಹೃದಯ್ ಮತ್ತು ಏಕಾಂತ್ ದಾವಣಗೆರೆಯ ಪೂಜಾ ಇಂಟರ್ನಾಷನಲ್ ಹೋಟೆಲ್ ನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಮೈಕ್ ಮುಂದೆ ನಿಂತು ತಮ್ಮ ಅನಿಸಿಕೆ ಹಂಚಿಕೊಂಡರು. ಹಾಗೂ ಹಾಸ್ಯ ನಟ ಮಹಾಂತೇಶ್, ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ ಪ್ರೋತ್ಸಾಹಿಸುವಂತೆ ಕೋರಿದರು.

admin

admin

Leave a Reply

Your email address will not be published. Required fields are marked *

error: Content is protected !!