ಸುದ್ದಿ 360 ದಾವಣಗೆರೆ, ಜ.10: ನಿವೃತ್ತ ಸರಕಾರಿ ನೌಕರರು ಗೌರವಯುತ ಜೀವನ ನಡೆಸಲು ಅನುಕೂಲವಾಗುವಂತೆ ಪಿಂಚಣಿ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಹ ಕೇಂದ್ರ ಸರಕಾರ, ಭವಿಷ್ಯ ನಿಧಿ ಇಲಾಖೆ ತಮಗೆ ಬೇಕಾದಂತೆ ಸುತ್ತೋಲೆ ಹೊರಡಿಸಿ ಪಿಂಚಣಿದಾರರಿಗೆ ತೊಂದರೆ ನೀಡುತ್ತಿವೆ ಎಂದು ಆರೋಪಿಸಿ ಇಂದು ಮಂಗಳವಾರ ಪಿಂಚಣಿದಾರರು ಪ್ರತಿಭಟನೆ ನಡೆಸಿದರು.
ನಗರದ ಕೆ.ಬಿ. ಬಡಾವಣೆಯ ಭವಿಷ್ಯ ನಿಧಿ ಕಚೇರಿ ಎದುರು ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಿದ ಪಿಂಚಣಿದಾರರು, ಸಾರಿಗೆ, ದೂರ ಸಂಪರ್ಕ ಸೇರಿ ಸರಕಾರದ ನಾನಾ ಇಲಾಖೆಗಳಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ನಿವೃತ್ತರಿಗೆ ಕನಿಷ್ಠ ಪಿಂಚಣಿ ನೀಡಲಾಗುತ್ತಿದೆ. ಇದರಿಂದ ನಿವೃತ್ತಿ ಜೀವನ ನಿರ್ವಹಣೆ ಕಷ್ಟವಾಗಿದೆ. ಪ್ರಸ್ತುತ 7,500 ರೂ. ಪಿಂಚಣಿ ನೀಡುತ್ತಿದ್ದು, ನಿವೃತ್ತ ನೌಕರರು ನಿಧನರಾದರೆ ಅವರ ಪತ್ನಿಯರಿಗೆ ಪೂರ್ಣ ಪ್ರಮಾಣದ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಂ. ಶಾಂತಪ್ಪ, ಕೆ.ಎಂ. ಮರುಳಸಿದ್ದಯ್ಯ, ನಾಗರಾಜ್, ಚಂದ್ರಪ್ಪ, ರುದ್ರಪ್ಪ, ಸಂಗಪ್ಪ, ಗಂಗಾಧರ್, ಡಿ.ಎಚ್. ಶೆಟ್ಟರ್, ಗುರುಮೂರ್ತಿ, ವಿಶ್ವನಾಥಯ್ಯ, ನಾರಾಯಣ ಶಿಂಧೆ, ಕೆ. ನಾಗಪ್ಪ ಇತರರಿದ್ದರು.