ಗ್ರಾಮಕ್ಕೆ ಜಲದಿಗ್ಬಂಧನ – ಚುಚ್ಚುಮದ್ದಿಗೆ ದೋಣಿಯಲ್ಲಿ ಸಾಗಿದ ಬಾಣಂತಿ-ಮಗು

ಸುದ್ದಿ360, ರಾಮನಗರ ಆ.4: ಮಳೆಯ ಅಬ್ಬರದಿಂದಾಗಿ ಮಾಗಡಿ ತಾಲೂಕಿನ ಈಡಿಗರ ಪಾಳ್ಯ ಗ್ರಾಮದ ರಸ್ತೆ ನೀರಿನಿಂದ ಮುಚ್ಚಿ ಹೋಗಿರುವ ಕಾರಣ ಗ್ರಾಮದ  ಸೌಭಾಗ್ಯ ಎಂಬ ಬಾಣಂತಿ ತನ್ನ 6 ದಿನದ ಕೂಸಿಗೆ ಚುಚ್ಚುಮದ್ದು ಕೊಡಿಸಲು ಮಳೆಯ ನಡುವೆಯೂ ಒಂದೂವರೆ ಕಿ.ಮೀ. ದೋಣಿಯಲ್ಲಿ ಸಾಗಿದ ಘಟನೆ ವರದಿಯಾಗಿದೆ.

ಮಗುವಿಗೆ ಚುಚ್ಚುಮದ್ದು ಹಾಕಿಸಲು ಸೋಲೂರು ಆಸ್ಪತ್ರೆಗೆ ಹೋಗಬೇಕಿತ್ತು. ಇದಕ್ಕಾಗಿ ಮಳೆಯ ನಡುವೆ ಸುಮಾರು ಒಂದೂವರೆ ಕಿ.ಮೀ ದೂರ ದೋಣಿಯಲ್ಲಿ ಸಂಚರಿಸಿ, ತಿಪ್ಪಸಂದ್ರ ಗ್ರಾಮದ ಎನ್.ಎಚ್.ರಸ್ತೆ ತಲುಪಿ ಅಲ್ಲಿಂದ ಸುಮಾರು 24 ಕಿಮೀ ದೂರ ಇರುವ ಸೋಲೂರು ಆಸ್ಪತ್ರೆ ತಲುಪಿದ್ದಾರೆ. ಮಹಿಳೆಗೆ 6 ದಿನಗಳ ಹಿಂದೆ ಸೋಲೂರು ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು.

ಗ್ರಾಮಕ್ಕೆ ಜಲದಿಗ್ಬಂಧನ – ಶಾಸಕರಿಂದ ದೋಣಿ

ಈಡಿಗರಪಾಳ್ಯ ಗ್ರಾಮಕ್ಕೆ ಮೊದಲಿನಿಂದಲೂ ಸೂಕ್ತ ರಸ್ತೆ ಇಲ್ಲ. ಕಚ್ಚಾರಸ್ತೆಯಲ್ಲೇ ಗ್ರಾಮಸ್ಥರು ತಿರುಗಾಡುತ್ತಿದ್ದರು. ಕೆಲ ದಿನಗಳಿಂದ ಸುರಿಯುತ್ತಿರುವ ಬಿರು ಮಳೆಯಿಂದಾಗಿ ಗ್ರಾಮಕ್ಕೆ ಜಲದಿಗ್ಭಂಧನವಾಗಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾದ ನಂತರ ಕ್ಷೇತ್ರದ ಶಾಸಕ ಎ.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಜನರ ತಿರುಗಾಟಕೆ ದೋಣಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಇದೇ ದೋಣಿ ಇಂದು ಬಾಣಂತಿ ಮತ್ತು ಮಗುವಿನ ನೆರವಿಗೆ ಬಂದಿದೆ.

ಆರೋಗ್ಯದಂತಹ ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಚಿಕಿತ್ಸೆಗೆ ಸರಿಯಾದ ಸಂಚಾರದ ವ್ಯವಸ್ಥೆಯನ್ನೇ ಕಾಣದೆ ಗ್ರಾಮದ  ಜನತೆ ಪರದಾಡುವಂತಾಗಿದ್ದು ಸಂಬಂಧಿಪಟ್ಟವರು ಇತ್ತ ಗಮನಹರಿಸಿ ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಲಿ ಎಂಬುದು ಗ್ರಾಮಸ್ಥರ ಕೋರಿಕೆ.

admin

admin

Leave a Reply

Your email address will not be published. Required fields are marked *

error: Content is protected !!