ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಚಿಕ್ಕಮಗಳೂರು, ಜ 18 : ಚಿಕ್ಕಮಗಳೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಅವಶ್ಯಕವಿರುವ ಅನುದಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಚಿಕ್ಕಮಗಳೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕೃಷಿ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಅರಣ್ಯ ಇಲಾಖೆ ಇವರುಗಳ ಸಹಯೋಗದಲ್ಲಿ  ಆಯೋಜಿಸಿರುವ  “ಚಿಕ್ಕಮಗಳೂರು ಹಬ್ಬ” ಉದ್ಘಾಟಿಸಿ ಮಾತನಾಡಿದರು.

ಚಿಕ್ಕಮಗಳೂರು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿಸಬೇಕಿದೆ. ಜಿಲ್ಲೆಯಲ್ಲಿ ಹೆಲಿಕಾಪ್ಟರ್ ರೈಡ್ ನ್ನು  ಒಳಗೊಂಡಂತೆ ಪ್ರವಾಸಿ ಹಬ್ ಮಾಡುತ್ತಿರುವುದು ಒಳ್ಳಯ ಕೆಲಸ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಟ್ರ್ಯಾಕ್ ರೇಸಿಂಗ್, ಗ್ಲೈಡಿಂಗ್, ಗಾಲ್ಫಿಂಗ್ ಸೇರಿದಂತೆ ಅಡ್ವೆಂಚರ್ ಟೂರಿಸಂ ಅಭಿವೃದ್ಧಿ ಪಡಿಸಲು ಸರ್ಕಾರ ಎಲ್ಲ ಸಹಕಾರ ನೀಡಲಿದೆ. ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಮನೆ ಮನೆಗೆ ನೀರು :

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಪ್ರಧಾನಿ ಮೋದಿಯವರು ದೇಶದ ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಕಳೆದ 2 ವರ್ಷದಲ್ಲಿ 50 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ತಲುಪಿಸಲಾಗಿದೆ. ತರೀಕೆರೆ, ಕಡೂರು, ಚಿಕ್ಕಮಗಳೂರಿನಲ್ಲಿ ಸುಮಾರು 1400 ಕೋಟಿ ರೂ.ಗಳಲ್ಲಿ ಮನೆಮನೆಗೆ ಕುಡಿಯುವ ನೀರು ತಲುಪಿಸಲಾಗುತ್ತಿದೆ.  ಗೋಂದಿ ಕೆರೆ ತುಂಬಿಸುವ ಯೋಜನೆಗೆ 12 ಕೋಟಿ ರೂ. ಅನುಷ್ಠಾನಗೊಳಿಸಲಾಗುವುದು ಎಂದರು. 

ಮುಂದಿನ ವರ್ಷ ಹೆಲಿಪೋರ್ಟ್ ಸಿದ್ಧವಾಗಿರಬೇಕು

ಈಗಾಗಲೇ ಹೆಲಿಪೋರ್ಟ್ ಗಾಗಿ 30 ಕೋಟಿ ರೂ.ಗಳನ್ನು ನೀಡಲಾಗಿದ್ದು, ಅದನ್ನು ಕೂಡಲೇ  ಕೈಗೊಳ್ಳಲಾಗುವುದು. ಸುಮಾರು 40 ಎಕರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭ ಮಾಡಿದರೆ, ಅದಕ್ಕೆ ಅನುದಾನ ಒದಗಿಸಲಾಗುವುದು. ಮುಂದಿನ ವರ್ಷ ಹೆಲಿಪೋರ್ಟ್ ಸಿದ್ಧವಾಗಿರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದ್ದು, ಎಲ್ಲಾ ಬೆಂಬಲವನ್ನು ಒದಗಿಸಲಾಗುವುದು. ಬರುವ ದಿನಗಳಲ್ಲಿ ಬದಲಾವಣೆ ತರಲಾಗುವುದು.  ಈ ವರ್ಷ ರೋಪ್ ವೇ ಗೆ ಸಹ ಮಂಜೂರು ಮಾಡಲಾಗಿದೆ. ಅನುದಾನಕ್ಕೆ ಅನುಮತಿ ನೀಡುವ ಭರವಸೆ ದೊರೆತಿದೆ ಎಂದರು.

ಮೊಬೈಲ್ ಕ್ಲಿನಿಕ್

 ಸಿಎಂ ಆರೋಗ್ಯ ವಾಹಿನಿ ಎಂದು ಬಜೆಟ್ ನಲ್ಲಿ 11 ಕೋಟಿ ರೂ.ಗಳನ್ನು ಚಿಕ್ಕಮಗಳೂರಿಗೆ ನೀಡಲಾಗಿದೆ. ಪ್ರತಿ ತಾಲ್ಲೂಕಿಗೆ ಮೊಬೈಲ್ ಕ್ಲಿನಿಕ್ ಒದಗಿಸಲಾಗುತ್ತಿದ್ದು, ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದರು. ಮೊಬೈಲ್ ಕ್ಲಿನಿಕ್ ಒದಗಿಸಲು ಆಯ್ಕೆಯಾಗಿರುವ  5 ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಕೂಡ ಒಂದು. ಚಿಕ್ಕಮಗಳೂರು ಹಬ್ಬ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿ. ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಇನ್ನೊಬ್ಬರಿಗೆ ಅನ್ಯಾಯವಾಗದಂತೆ ನ್ಯಾಯದಾನ

ಕಲೆ, ಕಲಾವಿದರು, ಭಾಷೆ, ಎಲ್ಲವೂ ಮನಸ್ಸುಗಳನ್ನು ಕೂಡಿಸುತ್ತದೆ. ನಾಗರಿಕತೆ ಸಂಸ್ಕೃತಿಯ ವ್ಯತ್ಯಾಸ ತಿಳಿದುಕೊಳ್ಳಬೇಕು. ಇದರ ಕಲ್ಪನೆ ಬರಲು ಇಂಥ ಹಬ್ಬಗಳು ಸಹಕಾರಿ. ಕಲಾವಿದರು. ಕಲೆಗೆ ಬೆಲೆ ನೀಡಬೇಕು. ಶಾಂತಿ, ಸಮಾಧಾನದಿಂದ ಕೂತು ಮಾತನಾಡಿದಾಗ ಎಲ್ಲಾ ಸಮಸ್ಯೆಗೂ ಪರಿಹಾರವಿದೆ.  ದತ್ತ ಪೀಠದ ವಿಚಾರ ದಲ್ಲಿ ಅನ್ಯಾಯವಾಗಿರುವುದಕ್ಕೆ ನ್ಯಾಯ ಕೊಡೋಣ, ಆದರೆ ಇನ್ನೊಬ್ಬರಿಗೆ ಅನ್ಯಾಯವಾಗದಂತೆ ನ್ಯಾಯದಾನ ಮಾಡಬೇಕು. ಶಾಂತಿ ಸೌಹಾರ್ದತೆ, ಭಾತೃತ್ವದಲ್ಲಿ ಇನ್ನಷ್ಟು ಕೆಲಸ ಮಾಡೋಣ. ಚಿಕ್ಕಮಗಳೂರಿನ ಶ್ರೇಯಸ್ಸು ಆಕಾಶವನ್ನು  ಮುಟ್ಟಲಿ ಎಲ್ಲರ ಹಬ್ಬವಾಗಲಿ ಎಂದರು.

ಈ ಸಂದರ್ಭದಲ್ಲಿ  ಸಚಿವರಾದ ಬಿ.ಎ.ಬಸವರಾಜ(ಬೈರತಿ),  ‌ವಿ.ಸುನೀಲ್ ಕುಮಾರ್, ವಿಧಾನ ಪರಿಷತ್ ಉಪ ಸಭಾಪತಿ ‌ ಎಂ.ಕೆ.ಪ್ರಾಣೇಶ್,  ಶಾಸಕರಾದ‌  ‌ಸಿ.ಟಿ.ರವಿ, ಡಿ.ಎಸ್. ಸುರೇಶ್, ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೆಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ‌ಡಿ.ಎನ್. ಜೀವರಾಜ್,  ಸೇರಿದಂತೆ ಜಿಲ್ಲೆಯ ‌ಅನೇಕ‌ ಜನಪ್ರತಿನಿಧಿಗಳು‌ ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!