ಸುದ್ದಿ360 ದಾವಣಗೆರೆ ಜ.14: ಹಣಕಾಸು ಪರಿಸ್ಥಿತಿ ವಿಶ್ಲೇಷಣೆ ಸಂಬಂಧ ಸಭೆ ನಡೆಸಲಾಗಿದ್ದು, ಇನ್ನೂ ಹಲವು ಸುತ್ತಿನ ಸಭೆ ನಡೆಸುವ ಅಗತ್ಯವಿದೆ. ಇನ್ನೆರಡು ದಿನದಲ್ಲಿ ಬಜೆಟ್‌ಗೆ ಸಂಬಂಧಿಸಿದ ಪೂರ್ವಭಾವಿ ಸಭೆಗಳನ್ನು ಆರಂಭಿಸಲಾಗುವುದು. ಫೆಬ್ರವರಿ ಎರಡನೇ ವಾರದಲ್ಲಿ ಜನಪರ ಬಜೆಟ್ ಮಂಡನೆಯಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ನಗರದ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 2022ರ ಡಿಸೆಂಬರ್‌ವರೆಗೆ ರಾಜ್ಯದಲ್ಲಿ ನಿರೀಕ್ಷೆ ಮೀರಿ ತೆರಿಗೆ ಸಂಗ್ರಹವಾಗಿದೆ. ವಾಣಿಜ್ಯ ತೆರಿಗೆ, ಅಬಕಾರಿ, ವಾಹನ ತೆರಿಗೆ, ಸ್ಟಾಂಪ್ ಡ್ಯೂಟಿ ಸಂಗ್ರಹ ಗುರಿ ಮೀರಿದ್ದು, ಒಟ್ಟಾರೆ ತೆರಿಗೆ ಸಂಗ್ರಹ ಆಧರಿಸಿ ಬಜೆಟ್ ಗಾತ್ರ ನಿರ್ಧರಿಸಲಾಗುವುದು ಎಂದರು.
ದೇಶದಲ್ಲೇ ಅತಿ ಹೆಚ್ಚು ಜವಳಿ ರಫ್ತು ಮಾಡುತ್ತಿರುವ ರಾಜ್ಯ ಎಂಬ ಕೀರ್ತಿ ಕರ್ನಾಟಕಕ್ಕಿದೆ. ಈ ಸ್ಥಾನವನ್ನು ಮತ್ತಷ್ಟು ಗಟ್ಟಿಯಾಗಿಸಲು ಜವಳಿ ಕ್ಷೇತ್ರದಲ್ಲಿನ ಮೂಲ ಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ. ಆ ಕೆಲಸ ಮುಂಬರುವ ಬಜೆಟ್‌ನಲ್ಲಿ ಆಗಲಿದೆ.
ನಮ್ಮಲ್ಲಿ ಹತ್ತಿ ಬೆಳೆಯುವ ಪ್ರದೇಶಕ್ಕೆ ಹೋಲಿಸಿದರೆ ಜವಳಿ ಚಟುವಟಿಕೆಗಳು ಕಡಿಮೆ ಇವೆ. ಈ ಅನುಪಾತ ಸರಿದೂಗಿಸುವ ನಿಟ್ಟಿನಲ್ಲಿ ಹತ್ತಿ ಬೆಳೆಯುವ ಪ್ರದೇಶವನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ನಮ್ಮ ಮುಂದಿದ್ದು, ಇದಕ್ಕೆ ಅನುಗುಣವಾಗಿ ಜಿನ್ನಿಂಗ್, ಪ್ರೆಸ್ಸಿಂಗ್‌ನಿಂದ ಆರಂಭವಾಗಿ ಬಟ್ಟೆ ತಯಾರಿ, ಗಾರ್ಮೆಂಟ್ಸ್ ಸೇರಿದಂತೆ ಸಣ್ಣ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು ಜವಳಿ ಪಾರ್ಕ್ ಸ್ಥಾಪನೆ ಅತ್ಯಗತ್ಯವಾಗಿದೆ. ರಾಜ್ಯದಲ್ಲಿ ಜವಳಿ ಕ್ಷೇತ್ರದ ಚಟುವಟಿಕೆಗಳಿಗೆ ಚುರುಕು ಮುಟ್ಟಿಸುವ ಸಲುವಾಗಿ 25 ನೂತನ ಜವಳಿ ಪಾರ್ಕ್ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಈ ಬಾರಿ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.