ದಾವಣಗೆರೆ, ಮೇ. 22: ಮಹಾನಗರ ಪಾಲಿಕೆಯ 28 ನೇ ವಾರ್ಡ್ ಭಗತ್ ಸಿಂಗ್ ನಗರ ಹಾಗೂ 37 ನೇ ವಾರ್ಡ್ ನ ಮತದಾರರ ತೀರ್ಪಿಗೆ ನಾವು ತಲೆಬಾಗುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಎರಡೂ ವಾರ್ಡ್ಗಳ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ. ಕೇಂದ್ರ, ರಾಜ್ಯ, ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ಉಪಚುನಾವಣೆಯಲ್ಲಿ ನಮಗೆ ಸೋಲಾಗಿದೆ. ಉಪಚುನಾವಣೆಗಳು ಯಾವಾಗಲೂ ಆಡಳಿತ ಪಕ್ಷದ ಪರ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಿದ್ದಾರೆ. ಅಂತಿಮವಾಗಿ ಜನಾದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು. ನಾವು ತಲೆಬಾಗುತ್ತೇವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಂಘಟಿತರಾಗಿ ಬಿಜೆಪಿ ವಿರುದ್ಧ ಹೋರಾಡುತ್ತೇವೆ. ಚುನಾವಣೆ ಶಾಂತಿಯುತವಾಗಿ ನಡೆದಿದೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ದಾವಣಗೆರೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಹೇಳಿದ್ದಾರೆ.