ಬೇಡುವ ಜಂಗಮರೆಂದು ಎಸ್ಸಿ ಪ್ರಮಾಣಪತ್ರಕ್ಕೆ ಅರ್ಜಿಗಳ ರಾಶಿ
ಸುದ್ದಿ360 ದಾವಣಗೆರೆ, ಸೆ. 21: ಮಕ್ಕಳನ್ನು ಶಾಲೆಗೆ ಸೇರಿಸುವಾಗ ಪೋಷಕರು ಹೇಳುವ ಜಾತಿಯನ್ನೇ ನಮೂದಿಸಿಕೊಳ್ಳುತ್ತಾರೆ. ಪೋಷಕರ ಜಾತಿಯನ್ನು ಪ್ರಶ್ನಿಸುವ ಅಧಿಕಾರ ಶಾಲೆಗಳಿಗೆ ಇರುವುದಿಲ್ಲ. ಅಲ್ಲದೆ, ಜಾತಿ ಪ್ರಮಾಣಪತ್ರ ನೀಡುವಾಗ ಶಾಲಾ ದಾಖಲೆಗಳನ್ನು ಪ್ರಮುಖ ಎಂದು ಪರಿಗಣಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ ಕುಂದವಾಡ ಮಂಜುನಾಥ್, ವೀರಶೈವ ಜಂಗಮರಿಗೆ ಯಾವುದೇ ಕಾರಣಕ್ಕೂ ಎಸ್‌ಸಿ ಪ್ರಮಾಣಪತ್ರ ನೀಡಬಾರದು. ಕೆಲವರು ಶಾಲಾ ದಾಖಲೆ ತೋರಿಸಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಹಾಗೆ ನೀಡುವುದರಿಂದ ಮೂಲ ಎಸ್‌ಸಿ, ಎಸ್‌ಟಿ ಫಲಾನುಭವಿಗಳ ಅನ್ನ ಕಿತ್ತುಕೊಂಡಂತಾಗುತ್ತದೆ ಎಂದು ಮನವಿಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.
ಸದಸ್ಯೆ ಉಮಾ ಅವರೂ ಸಹ ಮಂಜುನಾಥ್ ಅವರ ಮಾತಿಗೆ ದನಿಗೂಡಿಸಿ, ಬೇಡ ಜಂಗಮರು ಹಿಂದುಳಿದ ಸಮುದಾಯದವರಾಗಿದ್ದು, ಪರಿಶಿಷ್ಟ ಜಾತಿ, ಪಂಗಡ ಸಮುದಾಯಕ್ಕೆ ಸೇರುವುದಿಲ್ಲ. ಹೀಗಾಗಿ ಅವರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಬಾರದು ಎಂದು ಕೋರಿದರು.
ನಾವು ಬೇಡುವ ಜಮಂಗಮರಾಗಿದ್ದು, ನಮಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿ’ ಎಂಬ ಕೋರಿಕೆಯ ಅರ್ಜಿಗಳ ರಾಶಿಯೇ ನಮ್ಮಲ್ಲಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ ಬೇಡ ಜಂಗಮ ಸಮುದಾಯದವರಿಗೆ ಎಸ್‌ಸಿ ಪ್ರಮಾಣಪತ್ರ ನೀಡುತ್ತಿಲ್ಲ. ಈ ರೀತಿಯ ಅರ್ಜಿಗಳು ಪ್ರತಿನಿತ್ಯ ಜಿಲ್ಲೆಯಲ್ಲಿ ನೂರಾರು ಅರ್ಜಿಗಳು ಬರುತ್ತಿವೆ. ಆದರೂ ಇದುವರೆಗೆ ಒಂದೇ ಒಂದು ಪ್ರಮಾಣಪತ್ರವನ್ನೂ ನೀಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಉಪವಿಭಾಗಾಧಿಕಾರಿ ದುರ್ಗಶ್ರೀ, ಸಮಿತಿ ಸದಸ್ಯ ಆವರಗೆರೆ ವಾಸು ಹಾಗೂ ಇತರರಿದ್ದರು.
ಅಂಬೇಡ್ಕರ್ ಭವನ
ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನಗಳಿವೆ. ಆದರೆ, ದಾವಣಗೆರೆ ನಗರದಲ್ಲಿ ಇದುವರೆಗೆ ಒಂದೇ ಒಂದು ಅಂಬೇಡ್ಕರ್ ಭವನ ಇಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಜಾಗ ಗುರುತಿಸುವ ಕೆಲಸ ಆಗಿಲ್ಲ ಎಂದು ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೌಸರ್ ರೇಷ್ಮಾ ಮಾತನಾಡಿ, ಈ ಹಿಂದೆ ಸರ್ಕಿಟ್ ಹೌಸ್ ಬಳಿ ಜಾಗ ಗುರುತಿಸಿ ಮೇ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ದಲಿತ ಮುಖಂಡರು ವಿರೋಧಿಸಿದ್ದರಿಂದ ಯೋಜನೆ ನೆನಗುದಿಗೆ ಬಿದ್ದಿದೆ ಎಂದರು. ಮುಖಂಡರು ಮೊದಲು ತಮ್ಮೊಳಗಿನ ಭಿನ್ನಾಬಿಪ್ರಾಯ ಪರಿಹರಿಸಿಕೊಂಡು ಬಂದರೆ, ಸಭೆ ನಡೆಸಿ ಜಾಗ ಅಂತಿಮಗೊಳಿಸಿ, ಕಾಮಗಾರಿ ಆರಂಭಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಕಾನೂನು ಅರಿವು ಕಾರ್ಯಕ್ರಮಗಳಾಗಲಿ
ಗ್ರಾಮೀಣ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮೇಲ್ಜಾತಿ, ಕೆಳ ಜಾತಿಯವರ ನಡುವೆ ಸಂಘರ್ಷ ಹೆಚ್ಚಾಗಿದೆ. ಕಾನೂನು ಬಗ್ಗೆ ಅರಿವಿಲ್ಲದಿರುವುದು ಇದಕ್ಕೆ ಕಾರಣವಾಗುತ್ತಿದ್ದು, ಯುವ ಜನತೆ ಹಾಗೂ ಗ್ರಾಮಸ್ಥರಿಗೆ ಕಾನೂನು ಅರಿವು ಮೂಡಿಸುವ ಮೂಲಕ ಅಪರಾಧ ಮುಕ್ತ ಗ್ರಾಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಸಮಿತಿ ಸದಸ್ಯ ಜಗಳೂರಿನ ಅರವಿಂದ್ ಸಲಹೆ ನೀಡಿದರು. ಸಲಹೆಗೆ ಪ್ರಶಂಸೆ ವ್ಯಕ್ತಪಡಿಸಿದ ಎಸ್‌ಪಿ ಸಿ.ಬಿ. ರಿಷ್ಯಂತ್, ಅಪರಾಧ ಆಗುವ ಮೊದಲೇ ಅದನ್ನು ತಡೆಯುವುದು ಸೂಕ್ತ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಕಾನೂನು ವಿಭಾಗದ ಸಹಭಾಗಿತ್ವದಲ್ಲಿ ಜಾಗೃತಿ ಸಭೆ ನಡೆಸುವುದಾಗಿ ತಿಳಿಸಿದರು.