ಜಿಂಕೆ ಮರಿ ಓಡ್ತಾಯ್ತೆ ನೋಡ್ಲಾ ಮಗಾ. . . ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಅಕ್ರಮ ವನ್ಯಜೀವಿ ಸಾಕಾಣಿಕೆ?

ಆಡಳಿತ ಪಕ್ಷಕ್ಕೆ ನುಂಗಲಾರದ ತುತ್ತಾಯಿತೆ. . . !?

ಸುದ್ದಿ360 ದಾವಣಗೆರೆ: ಇಲ್ಲಿ ಯಾರನ್ನಾದರೂ ರಾಜಕೀಯ ಕುರಿತು ಮಾತಿಗೆಳೆದರೆ, ಜಿಂಕೆ ನಿಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಅಷ್ಟೇ ಅಲ್ಲ ಕೃಷ್ಣಮೃಗ, ಕಾಡು ಹಂದಿ, ನರಿ, ಮುಂಗಸಿ ಇವುಗಳೂ ಕೂಡ ನಿಮ್ಮ ಕಣ್ಣಮುಂದೆ ಬರದೇ ಇರವು.

ಅರೆರೆ ರಾಜಕೀಯಕ್ಕು ಈ ವನ್ಯಜೀವಿಗಳಿಗೂ ಏನು ಸಂಬಂಧ ಅಂತೀರಾ . . .?

ನಗರದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ವನ್ಯಜೀವಿಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಳೆದ ಒಂದು ವಾರದಿಂದ ದಾವಣಗೆರೆಯಲ್ಲಿ ರಾಜಕೀಯ ಪ್ರಹಸನ ನಡೆಯುತ್ತಿದ್ದು, ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ಜೆಡಿಎಸ್ ಪಕ್ಷ ಕೂಡ ಸ್ಥಳದ ಮಾಲೀಕರಾದ  ಎಸ್ ಎಸ್ ಮಲ್ಲಿಕಾರ್ಜುನ್ ರನ್ನು ಬಂಧಿಸಬೇಕೆಂದು ಒತ್ತಾಯ ಮಂಡಿಸುತ್ತಲೇ ಇವೆ.

ಇನ್ನು ಅಮಾಯಕರನ್ನು ಶಿಕ್ಷೆಯಿಂದ ತಪ್ಪಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಜಿ್ಲ್ಲಾ ಬಿಜೆಪಿ. ಪ್ರಕರಣದ ಲಾಭವನ್ನು ತೆಗೆದುಕೊಳ್ಳಲು ಮುಂದಾಗಿದೆ ಆದರೂ ಪ್ರಕರಣದಲ್ಲಿ ಆರೋಪಿ ನಂ.1 ಸ್ಥಾನದಲ್ಲಿ ನಿಲ್ಲಬೇಕಾದವರು   ಉನ್ನತ ಮಟ್ಟದ ರಾಜಕೀಯ ಪ್ರಭಾವ ಹಾಗೂ ಹಣದ ಪ್ರಭಾವ ಬೀರುವ ಮೂಲಕ ಬಿಜೆಪಿಯನ್ನು ಕೈ-ಕೈ ಹಿಸುಕಿಕೊಳ್ಳುವಂತೆ ಮಾಡಿದೆ ಎಂದು ಸ್ವತಃ ಬಿಜೆಪಿ ವಲಯದಲ್ಲೇ ಕೇಳಿಬರುತ್ತಿರುವ ಮಾತು.

ವನ್ಯಜೀವಿಗಳು ದೊರೆತಿರುವ ಪ್ರದೇಶ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಸೇರಿದ್ದು, ಇದರ ದಾಖಲೆಗಳನ್ನು ಸಹ ನಾವು ತೆಗೆದಿರಿಸಿಕೊಂಡಿದ್ದೇವೆ. ಮತ್ತು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಕೂಡ ತರಲಾಗಿದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಯಶವಂತ ರಾವ್ ಜಾಧವ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು, ದಾವಣಗೆರೆ.

ವನ್ಯಜೀವಿಗಳು ದೊರೆತಿರುವ ಪ್ರದೇಶ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಸೇರಿದ್ದು, ಅವರನ್ನು ಮೊದಲ ಆರೋಪಿಯನ್ನಾಗಿಸಿ ಬಂಧಿಸಬೇಕು ಎಂದು ಬೀದಿಗಿಳಿದು ಹೋರಾಟ ಮಾಡುತ್ತಿರುವ ಜಿಲ್ಲಾ ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳ ಬಳಿಯೂ ನಿಯೋಗ ತೆಗೆದುಕೊಂಡು ಹೋಗಿ ಮನವರಿಕೆ ಮಾಡಿದೆಯಾದರೂ ಫಲಿತಾಂಶ ಇನ್ನೂ ಕನ್ನಡಿಯ ಗಂಟಾಗಿಯೇ ಉಳಿದಿದೆ.

ಜಿಲ್ಲಾ ಬಿಜೆಪಿ ನರಹಂತಕ ವೀರಪ್ಪನ್ ಭಾವಚಿತ್ರಕ್ಕೆ ಎಸ್ ಎಸ್ ಮಲ್ಲಿಕಾರ್ಜುನ್ ಮುಖವನ್ನು ಜೋಡಿಸಿ ಫಾರ್ಮ್ ಹೌಸ್ ನಲ್ಲಿ ಇರಿಸಲಾಗಿದ್ದ ವನ್ಯಜೀವಿಗಳ ಪ್ರಕರಣವನ್ನು ವೈರಲ್ ಮಾಡುತ್ತಿದೆ. ಇದರ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್ ಮುಖಂಡರು ಬಿಜೆಪಿಯದು ಭ್ರಷ್ಟ ಹಾಗೂ 40%  ಆಡಳಿತ, ಪೇ ಜಿಎಂಎಸ್, 40 ಪರ್ಸೆಂಟ್ ಸಿದ್ದೇಶ್ವರ್, ಬೇಲಿಕೇರಿ ಅದಿರು ಪ್ರಕರಣ ಹೀಗೆ ಹತ್ತು ಹಲವು ಆರೋಪಗಳನ್ನು ಹೊರಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್‍ಗಳನ್ನು ವೈರಲ್ ಮಾಡುತ್ತಿದೆ.

ಅಭಿವೃದ್ಧಿಯ ಹರಿಕಾರ, ಜನಾನುರಾಗಿ, ದೀನದಲಿತರ ಬಂಧು ಆಗಿರುವ  ಎಸ್ ಎಸ್ ಎಂ ಅವರಿಗೆ  ಪ್ರಾಣಿಗಳನ್ನು ಸಾಕುವುದು ಕೂಡ ಅವರ ಹವ್ಯಾಸ, ಅಧಿಕೃತ ಪರವಾನಗಿಯನ್ನು ತೆಗೆದುಕೊಂಡೇ ವನ್ಯಪ್ರಾಣಿಗಳನ್ನು ಸಾಕಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.

ಈ ರಾಜಕೀಯ ಪಕ್ಷಗಳ ಪ್ರಹಸನವನ್ನು ನೋಡುತ್ತಿರುವ ಸಾರ್ವಜನಿಕರು ಕೆಲವರು ಎಂಜಾಯ್ ಮಾಡುತ್ತಿದ್ದರೆ, ಮತ್ತೆ ಕೆಲವರು ಬಿಜೆಪಿಯ ಸ್ಥಿತಿಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ.

“ವನ್ಯಜೀವಿಗಳನ್ನು ಅಕ್ರಮವಾಗಿ ಇರಿಸಿಕೊಳ್ಳಲಾಗಿದ್ದು, ಸ್ಥಳದ ಮಾಲೀಕ  ಎಸ್ ಎಸ್ ಮಲ್ಲಿಕಾರ್ಜುನ್ ಎಂಬುದು ಜಗಜ್ಜಾಹೀರಾಗಿದ್ದರೂ ಕೂಡ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಆರೋಪಿಯನ್ನು ಬಂಧಿಸಲಾಗುತ್ತಿಲ್ಲ. ಎಸ್ ಎಸ್ ಎಂ ಅವರ ಪ್ರಭಾವ  ಯಾವ ಮಟ್ಟಕ್ಕಿದೆ” ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡಬೇಕಾದ ಡಿಎಫ್ಒ ಇಲ್ಲಿನ ಸಂಸದರ ದೂರವಾಣಿ ಕರೆಯನ್ನೂ ಸ್ವೀಕರಿಸದೆ, ಮಾಧ್ಯಮದವರ ಕೈಗೂ ಸಿಗದಿರುವುದು ಜಿಲ್ಲಾ ಬಿಜೆಪಿ ಮುಖಂಡರನ್ನು ನಿದ್ದೆಗೆಡಿಸಿದೆ.

ವನ್ಯಜೀವಿಗಳು ಸಿಕ್ಕಿರುವ ರೈಸ್ ಮಿಲ್ಲು ಯಾರ ಒಡೆತನದಲ್ಲಿ ಇದೆ? ವನ್ಯಜೀವಿಗಳ ಸಾಕಾಣಿಕೆಗೆ ಅಧಿಕೃತ ಲೈಸನ್ಸ್ ಪಡೆಯಲಾಗಿದೆಯೇ?  ಪಡೆದಿದ್ದಲ್ಲಿ ಅವುಗಳ ನಿರ್ವಹಣೆ ಎಂದಿನಿಂದ ಮತ್ತು ಹೇಗೆ ನಡೆದಿದೆ ಎಂಬುದರ ಕಡತಗಳನ್ನು ಸಾರ್ವಜನಿಕರಿಗೆ ಬಹಿರಂಗಗೊಳಿಸಲಿ ನಾವು ಹೋರಾಟವನ್ನು ನಿಲ್ಲಿಸುತ್ತೇವೆ ಎಂಬುದು ಜಿಲ್ಲಾ ಬಿಜೆಪಿ ಮುಖಂಡರ ಹೇಳಿಕೆಯಾಗಿದೆ.

ವನ್ಯಜೀವಿ ಸಾಕಾಣಿಕೆ ಕುರಿತಂತೆ ಇರುವ ಕಾನೂನು ಕಟ್ಟಳೆಯನ್ನು ಸಾರ್ವಜನಿಕರಿಗೆ ನಿಖರವಾಗಿ ಮಾಹಿತಿ ನೀಡುವ ಮೂಲಕ ಈ ಪ್ರಕರಣದಲ್ಲಿ ಸಾರ್ವಜನಿಕ ವಲಯದಲ್ಲಿ ಮೂಡಿರುವ ಗೊಂದಲವನ್ನು ಹೋಗಲಾಡಿಸಬೇಕು ಮತ್ತು ವನ್ಯಜೀವಿಗಳ ರಕ್ಷಣೆ ಮತ್ತು ಅವುಗಳನ್ನು ರಕ್ಷಿಸಬೇಕಾಗಿರುವ ಮಹತ್ವವನ್ನು ಮನದಟ್ಟು ಮಾಡುವುದು ಸೇರಿದಂತೆ ವನ್ಯಜೀವಿಗಳನ್ನು ದತ್ತು ಪಡೆದು ಸಾಕುವವರಿಗೆ ಯಾವ ರೀತಿಯ ಅವಕಾಶಗಳು ಕಾನೂನಿನಡಿಯಲ್ಲಿ ಇವೆ ಎಂಬುದರ ಕುರಿತಾಗಿ ಮಾಹಿತಿ ಒದಗಿಸುವ ಮತ್ತು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವವರ ನೆರವಿಗೆ ಸರ್ಕಾರ ಸಹಾಯ ಹಸ್ತ ನೀಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳ ಮತ್ತು ಸರ್ಕಾರದ ಜವಾಬ್ದಾರಿ ಮಹತ್ತರವಾಗಿದೆ.

admin

admin

Leave a Reply

Your email address will not be published. Required fields are marked *

error: Content is protected !!