ಸುದ್ದಿ360 ದಾವಣಗೆರೆ, ಏ. 24: ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ. ಕೆ ಅರುಣ್ ಐಪಿಎಸ್ ರವರು ಇಂದು ಅಧಿಕಾರ ವಹಿಸಿಕೊಂಡರು.
ನೂತನ ಅಧಿಕಾರಿ ಡಾ. ಅರುಣ್ ಅವರು ಈ ಮೊದಲು ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಈ ಮೊದಲು ಜಿಲ್ಲೆಯ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಬಿ. ರಿಷ್ಯಂತ್ ಅವರು ಚುನಾವಣೆ ಮಾರ್ಗಸೂಚಿಯನ್ವಯ ವರ್ಗಾವಣೆ ಹೊಂದಿದ್ದಾರೆ. ಸಿ. ಬಿ. ರಿಷ್ಯಂತ್ ಅವರ ಹತ್ತಿರದ ಸಂಬಂಧಿಯೊಬ್ಬರು ವಿಧಾನಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ಮೆಲೆಯಲ್ಲಿ ಚುನಾವಣಾ ಮಾರ್ಗಸೂಚಿಗಳ ಪ್ರಕಾರ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಕಟ ಸಂಬಂಧಿ ಚುನಾವಣೆಯಲ್ಲಿ ನಿಂತಿದ್ದರೆ ಅಧಿಕಾರಿ ಚುನಾವಣಾ ಪ್ರಕ್ರಿಯೆಯ ಭಾಗವಾಗಿರಬಾರದು. ಈ ಕಾರಣದಿಂದಾಗಿ ಅವರನ್ನು ದಾವಣಗೆರೆಯಿಂದ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.