ಜೀವನದಲ್ಲಿ ವಚನಗಳನ್ನು ಅಳವಡಿಸಿಕೊಂಡಲ್ಲಿ ವ್ಯಕ್ತಿ ವಿಶ್ವಮಾನವನಾಗುತ್ತಾನೆ: ಬಸವಪ್ರಭು ಶ್ರೀ

ಸುದ್ದಿ360 ದಾವಣಗೆರೆ, ಆ.23: ಪ್ರತಿಯೊಬ್ಬರೂ ವಚನಗಳನ್ನು ಓದಬೇಕು, ಕಲಿಯಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವ್ಯಕ್ತಿ ವಿಶ್ವಮಾನವನಾಗುತ್ತಾನೆ ಎಂಬುದಾಗಿ  ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ದೊಡ್ಡಪೇಟೆಯ ಶ್ರೀ ಮುರುಘರಾಜೇಂದ್ರ ವಿರಕ್ತಮಠದಲ್ಲಿ ಇಂದು ಹಮ್ಮಿಕೊಂಡಿದ್ದ ವಚನ ಕಂಠಪಾಠ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ವಚನ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಮಾಜದಲ್ಲಿ ವೈದ್ಯರು, ಎಂಜಿನಿಯರ್, ಬುದ್ಧಿವಂತರು, ವಿದ್ಯಾವಂತರು, ವಿಜ್ಞಾನಿಗಳು ಸಿಗುತ್ತಾರೆ. ಆದರೆ ಸಾತ್ವಿಕರು ಸಿಗುವುದಿಲ್ಲ. ನಮ್ಮ ನಡುವೆ ಇಂದು ಒಳ್ಳೆಯ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗಿದೆ. ಒಳ್ಳೆಯತನ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಒಳ್ಳೆಯ ವ್ಯಕ್ತಿಗಳನ್ನು ಸಮಾಜಕ್ಕೆ ನೀಡುವ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು.

ಮನಸಾಕ್ಷಿ ಇರುವವರು ಅಥವಾ ಅದಕ್ಕೆ ಹೆದರುವವರು ಕೆಟ್ಟ ಕೆಲಸ ಮಾಡುವ ಸಂದರ್ಭ ಬಂದಾಗ ಹಿಂದೆ ಸರಿಯುತ್ತಾರೆ. ಆದರೆ ಮನಸಾಕ್ಷಿಗೆ ಹೆದರದ ವ್ಯಕ್ತಿ ಅತ್ಯಂತ ದುಷ್ಟನಾಗಿರುತ್ತಾನೆ. ಇತ್ತೀಚೆಗೆ ಸಮಾಜದಲ್ಲಿ ಅಪರಾಧ, ಅನ್ಯಾಯ, ಮೋಸ, ವಂಚನೆ ಹೆಚ್ಚಾಗಿದ್ದು, ಮನುಷ್ಯ ಮನಸಾಕ್ಷಿ ಕಳೆದುಕೊಂಡಿರುವುದೇ ಇದಕ್ಕೆ ಕಾರಣ ಸ್ವಾಮೀಜಿ ಅಭಿಪ್ರಾಯಪಟ್ಟರು.

ವಚನಗಳು ವಿಶ್ವದ ಆಸ್ತಿಯಾಗಿದ್ದು, ಕೇವಲ ಕನ್ನಡಿಗರಿಗೆ ಅಥವಾ ಲಿಂಗಾಯತರಿಗೆ ಸೀಮಿತವಾಗಿಲ್ಲ. ಜಗತ್ತಿಗೆ ಬೇಕಾಗಿರುವ ಮುತ್ತು ರತ್ನಗಳಾಗಿವೆ. ಕನ್ನಡದ ವಚನ ಸಾಹಿತ್ಯಕ್ಕೆ ಜಗತ್ತಿಗೇ ಬೆಳಕು ನೀಡುವ ಶಕ್ತಿ ಇದೆ. ಅಂತಹ ವಚನ ಸಾಹಿತ್ಯವನ್ನು ಮಕ್ಕಳಿಗೆ ಕಲಿಸಬೇಕು. ವಚನಗಳನ್ನು ಕಲಿತ ವ್ಯಕ್ತಿ ಒಬ್ಬ ಪರಿಪೂರ್ಣ ವ್ಯಕ್ತಿಯಾಗುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಆದರ್ಶ ವ್ಯಕ್ತಿಯಾಗುತ್ತಾನೆ. ‘ಬಸವಣ್ಣನವರ ಕಲಬೇಡ, ಕೊಲಬೇಡ’ ವಚನದಲ್ಲಿರುವ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡರೆ ಜೀವನ, ಪಾವನವಾಗುತ್ತದೆ.

-ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ದಾವಣಗೆರೆ.

ಬಾಲ್ಯದಲ್ಲೇ ಮಕ್ಕಳಿಗೆ ವಚನಗಳನ್ನು ಕಲಿಸಬೇಕು. ಮಕ್ಕಳ ಮನಸ್ಸು ಹದವಾದ ಭೂಮಿ ಇದ್ದಂತೆ. ಬಾಲ್ಯದಲ್ಲಿ ಅವರ ಮನಸ್ಸಿನಲ್ಲಿ ಬಿತ್ತುವ ಎಲ್ಲ ಸದ್ಗುಣಗಳು ಮುಂದೆ ಸತ್ಫಲಗಳನ್ನು ನೀಡುತ್ತವೆ. ಆದ್ದರಿಂದ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ, ಸಾತ್ವಿಕತೆ ಕಲಿಸಬೇಕು. ಆಗ ಮಾತ್ರ ಅವರು ದೊಡ್ಡವರಾದ ಮೇಲೆ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ಮಹಾನ್ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಎಸ್‌ಜೆಎಂ ಶಾಲೆ ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಕ್ಕಳಿಗೆ ಒಟ್ಟು ಮೂರು ಹಂತಗಳಲ್ಲಿ ಮೂರು ದಿನಗಳ ಕಾಲ ಈ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪ್ರವಚನಕಾರ ಕುಮಾರ ಶಾಸ್ತ್ರಿಗಳು ಮಾತನಾಡಿ, ಶರಣರ ವಚನಗಳು ತಲೆಯಲ್ಲಿದ್ದರೆ ಕೆಟ್ಟ ಆಲೋಚನೆಗಳು ಬರುವುದಿಲ್ಲ. ಏನಾದರೂ ಕೆಟ್ಟ ಕೆಲಸ ಮಾಡುವಾಗ ಈ ವಚನಗಳು ನೆನಪಾಗಿ ವ್ಯಕ್ತಿ ಅಂತಹ ಕೆಲಸದಿಂದ ಹಿಂದೆ ಸರಿಯುತ್ತಾನೆ. ಇದಕ್ಕೆ ಪೂರಕವಾಗಿ ಮನೆ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ವಚನಗಳನ್ನು ಕಲಿಸುವ ಜತೆಗೆ, ಸದ್ಗುಣ, ಸಾತ್ವಿಕತೆ ಕಲಿಸಿಕೊಡಬೇಕು ಎಂದರು.

ವಚನ ಕಂಠಪಾಠ ಸ್ಪರ್ಧೆ ಉದ್ಘಾಟನೆಯ ನಂತರ 1ರಿಂದ 4ನೇ ತರಗತಿ ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ ನಡೆಯಿತು. ಮಕ್ಕಳು ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು ಸೇರಿ ವಿವಿಧ ವಚನಕಾರರ ವಚನಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಗಮನಸೆಳೆದರು.

ಸಮಾರಂಭದಲ್ಲಿ ದಕ್ಷಿಣ ವಲಯ ಬಿಆರ್‌ಸಿ ವೈ.ಎಂ. ವೀರಭದ್ರಯ್ಯ, ಹಳೇಪೇಟೆ ಕ್ಲಸ್ಟರ್ ಸಿಆರ್‌ಪಿ ಸದಾನಂದ, ಮಠದ ಸದಸ್ಯರಾದ ಚಿಗಟೇರಿ ಜಯದೇವ, ಟಿ. ಮಹಾಲಿಂಗೇಶ್, ಪ್ರಾಂಶುಪಾಲ ರೋಷನ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!