ಜು.11ಕ್ಕೆ ರೈತರಿಂದ ಮುಖ್ಯಮಂತ್ರಿ ಮನೆಗೆ ಮುತ್ತಿಗೆ

ಸುದ್ದಿ360 ದಾವಣಗೆರೆ, ಜು.02: ಕಬ್ಬು ಬೆಳೆಗೆ ಕನಿಷ್ಠ ಬೆಲೆ ನಿಗದಿ, ಹಳೇ ಬಾಕಿ ಪಾವತಿ ಹಾಗೂ ಕರ ನಿರಾಕರಣೆ ಚಳವಳಿಯಲ್ಲಿ ಕಟ್ಟದ ಗೃಹ ವಿದ್ಯುತ್ ಬಿಲ್ ಬಲತ್ಕಾರ ವಸೂಲಿ ಕ್ರಮದ ವಿರುದ್ಧ ಜು.11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಅಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ಮೆರವಣಿಗೆ ನಡೆಸಿ, ನಂತರ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದರು. ಕಬ್ಬು ಬೆಳೆಗಾರರು ಬೆಲೆ ಮೋಸ, ತೂಕದಲ್ಲಿ ವಂಚನೆ, ಬಾಕಿ ಪಾವತಿಯಲ್ಲಿ ವಿಳಂಬ ಇನ್ನೂ ಹತ್ತಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.  ಪ್ರತಿ ಟನ್ ಕಬ್ಬಿಗೆ 4500 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಕಬ್ಬು ಬೆಳೆಗಾರರು ಹಲವು ವರ್ಷಗಳಿಂದ ಮಾಡುತ್ತಿದ್ದಾರೆ. ಆದರೆ ಸರಕಾರ ಆ ಬಗ್ಗೆ ಗಮನಹರಿಸಿಲ್ಲ. ರಾಜ್ಯದಲ್ಲಿರುವ ಪ್ರಮುಖ ಸಕ್ಕರೆ ಕಾರ್ಖಾನೆಗಳ ಮಾಲಿಕರು, ಮುಖ್ಯಮಂತ್ರಿಗಳ ಅಕ್ಕಪಕ್ಕ ಕುಳಿತುಕೊಳ್ಳುವ ಸಚಿವರು, ಶಾಸಕರೇ ಆಗಿರುವ ಕಾರಣ ರೈತರಿಗೆ ನ್ಯಾಯ ಸಿಗುತ್ತಿಲ್ಲ. ಇದರೊಂದಿಗೆ ಹಲವು ವರ್ಷಗಳಿಂದ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಹಣವನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.

ದುಪ್ಪಟ್ಟಾಗಿದ್ದು ಆದಾಯವಲ್ಲ ವೆಚ್ಚ

ಕೇಂದ್ರ ಸರ್ಕಾರ ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವುದಾಗಿ ಹೇಳುತ್ತಲೇ ಇದೆ. ಆದರೆ. ಕಳೆದ ಕೆಲ ವರ್ಷಗಳಿಂದ ರಸಗೊಬ್ಬರ, ಬಿತ್ತನೆ ಬೀಜ ಇತರೆ ಕೃಷಿ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಉತ್ಪಾದನಾ ವೆಚ್ಚವನ್ನು ದುಪ್ಪಟ್ಟು ಮಾಡುವ ಮೂಲಕ  ಕೇಂದ್ರ ಸರಕಾರ ಮಾತಿಗೆ ತಪ್ಪಿದೆ ಎಂದರು.

ವಿದ್ಯುತ್ ಬಾಕಿ ವಸೂಲಿ ನಿಲ್ಲಿಸಿ

ಪ್ರೊ. ನಂಜುಂಡ ಸ್ವಾಮಿ ನೇತೃತ್ವದಲ್ಲಿ 2017ರಲ್ಲಿ ವಿದ್ಯುತ್ ತಾರತಮ್ಯ ನೀತಿ ಖಂಡಿಸಿ, ರೈತರು ಗೃಹ ವಿದ್ಯುತ್ ಬಿಲ್ ಪಾವತಿಸದೆ ಕರ ನಿರಾಕರಣೆ ಚಳವಳಿ ನಡೆಸಲಾಗಿತ್ತು. ಈ ವೇಳೆ ರೈತ ಮುಖಂಡರ ಜತೆ ಮಾತುಕತೆ ನಡೆಸಿದ ಸರಕಾರ, ಹಳೇ ಬಿಲ್ ಮನ್ನಾ ಮಾಡುವುದಾಗಿ ಹೇಳಿತ್ತು. ಆದರೆ ಈಗ ಆ ಬಿಲ್ ಪಾವತಿ ಮಾಡುವಂತೆ ರೈತರಿಗೆ ಬಲವಂತ ಮಾಡಲಾಗುತ್ತಿದೆ. ಸರಕಾರ ಕೂಡಲೆ ಈ ಕ್ರಮ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನುಲೇನೂರು ಶಂಕರಪ್ಪ, ಮಲ್ಲಯ್ಯ, ರವಿಕಿರಣ್, ಹನುಮಂತಪ್ಪ, ಪೂಣಚ್ಚ, ಗಂಗಣ್ಣ ಇತರರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!