ಆಹಾರ ಧಾನ್ಯಗಳ ಮೇಲಿನ ಜಿ ಎಸ್ ಟಿಗೆ ವಿರೋಧ
ಸುದ್ದಿ360, ದಾವಣಗೆರೆ, ಜು.13: ಸಾರ್ವಜನಿಕರ ದಿನನಿತ್ಯದ ಅತ್ಯಾವಶ್ಯಕ ಆಹಾರ ಧಾನ್ಯಗಳ ಮೇಲೆ ಜಿಎಸ್ ಟಿ ವಿಧಿಸಿರುವುದನ್ನು ಖಂಡಿಸಿ, ಅಕ್ಕಿ ಗಿರಣಿದಾರರ ಸಂಘ ಜು.15 ಮತ್ತು 16ರಂದು ಜಿಲ್ಲೆಯಾದ್ಯಂತ ಅಕ್ಕಿ ಗಿರಣಿಗಳ ಬಂದ್ ಮತ್ತು ಆಹಾರ ಧಾನ್ಯಗಳ ಮಾರಾಟ ವಹಿವಾಟನ್ನು ನಿಲ್ಲಿಸುವುದಾಗಿ ಜಿಲ್ಲಾ ಅಕ್ಕಿಗಿರಣಿದಾರರ ಸಂಘದ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಜಿಎಸ್ ಟಿ ಮಂಡಳಿ ಅಹಾರ ಧಾನ್ಯಗಳ ಮೇಲೆ ವಿಧಿಸಿರುವ ಶೇ. 5ರಷ್ಟು ಜಿಎಸ್ ಟಿ ವಿಧಿಸುತ್ತಿದೆ. ಈ ಬಗ್ಗೆ ಮಂಗಳವಾರ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಸಭೆ ನಡೆದು, ಸಭೆಯ ಸರ್ವಾನುಮತದ ನಿರ್ಣಯದಂತೆ ರಾಜ್ಯದ್ಯಂತ ಬಂದ್ ನಡೆಸುವ ನಿಟ್ಟಿನಲ್ಲಿ ಆಯಾ ಜಿಲ್ಲಾವಾರು ಬಂದ್ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆಹಾರ ಧಾನ್ಯಗಳ ಮೇಲಿನ ತೆರಿಗೆ ಪರೋಕ್ಷವಾಗಿ ರೈತರಿಗೂ ಹೊರೆಯಾಗಲಿದೆ. ನಾವು ಎಳ್ಳು ಕೊಟ್ಟಂಗೆ ಎಣ್ಣೆ ಮಾರ್ತೇವೆ. ಇದು ನಮಗಿಂತ ದಿನಬಳಕೆಯ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗಲಿದೆ.
-ಜಾವಿದ್ ಸಾಬ್, ಕರ್ನಾಟಕ ಮೆಕ್ಕೆಜೋಳ ವರ್ತಕರ ಕಾರ್ಯದರ್ಶಿ.
ಇದುವರೆಗಿನ ಸರ್ಕಾರಗಳು ಜನಸಾಮಾನ್ಯರಿಗೆ ಆಹಾರ ಧಾನ್ಯಗಳ ಅಗತ್ಯತೆಯನ್ನು ಮನಗಂಡು ತೆರಿಗೆ ವಿಧಿಸಿರಲಿಲ್ಲ. ಆದರೆ ಇದೀಗ ಕೇಂದ್ರ ಸರ್ಕಾರ ದಿಢೀರನೆ ಶೇ. 5 ಜಿಎಸ್ ಟಿ ವಿಧಿಸುತ್ತಿದ್ದು, ಇದು ಜು.18ರಿಂದ ಜಾರಿಗೆ ಬರುತ್ತಿದೆ. ಇದರಿಂದ ಜನ ಸಾಮಾನ್ಯರ ಜೀವನ ವೆಚ್ಚ ಹೆಚ್ಚಾಗಲಿದೆ. ಈ ತೆರಿಗೆಯನ್ನು ವಿಧಿಸದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಲವಾರು ಸಂಘ ಸಂಸ್ಥೆಗಳ ಮೂಲಕ ಮನವಿ ಸಲ್ಲಿಸಲಾಗಿದೆ ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದರು.
ಒಂದು ವೇಳೆ 18ರಂದು ಜಿಎಸ್ ಟಿ ಜಾರಿಗೆ ಬಂದಲ್ಲಿ, ರಾಜ್ಯಾದ್ಯಂತ ಕ್ರಮ ಕೈಗೊಳ್ಳಲು ಸಂಘಟನೆ ಮುಂದಾಗಲಿದೆ. ಈ ಎರಡು ದಿನಗಳ ಬಂದ್ ಸಾಂಕೇತಿಕವಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇಡೀ ರಾಜ್ಯಾದ್ಯಂತ ಜು. 15, 16ರಂದು ಬಂದ್ ನಡೆಯುತ್ತಿದ್ದು, ಆಯಾ ಜಿಲ್ಲೆಗಳ ವರ್ತಕರು ಮತ್ತು ಗಿರಣಿದಾರರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಬಂದ್ ಗೆ ಸಹಕಾರ ನೀಡಲಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ
ಇದೇ 15ರಂದು ದಾವಣಗೆರ ಜಿಲ್ಲಾ ಅಕ್ಕಿಗಿರಣಿ ಮಾಲೀಕರ ಸಂಘ, ಆಹಾರ ಧಾನ್ಯಗಳ ವರ್ತಕ ಸಂಘ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ದಾವಣಗೆರೆಯಲ್ಲಿ ಬೆಳಿಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿರುವ 90ಕ್ಕೂ ಹಚ್ಚು ಅಕ್ಕಿ ಗಿರಣಿಗಳು ಬಂದ್ ಆಗಲಿವೆ. ಮತ್ತು ಚೌಕೆ ಪೇಟೆಯಲ್ಲಿರುವ ಎಲ್ಲ ಸಗಟು ವ್ಯಾಪಾರಸ್ಥರು ಸೇರಿದಂತೆ ನಗರದಲ್ಲಿ ಸಗಟು ವ್ಯಾಪಾರಿಗಳು ವಹಿವಾಟು ನಿಲ್ಲಿಸಿ ಬಂದ್ ಗೆ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಾಳೆಹೊಲದ ಸಿದ್ದಣ್ಣ, ಕೆ.ಜಿ.ನಾಗರಾಜ್, ಶಂಭುಲಿಂಗಪ್ಪ, ರಾಜಗೋಪಾಲ್, ಕುಂಬಳೂರು ಚಂದ್ರಣ್ಣ, ಲತೀಫ್ ಸಾಬ್, ಪ್ರಕಾಶ್, ಪುಟ್ಟಪ್ಪ ಇತರರು ಇದ್ದರು.