ಸುದ್ದಿ360, ದಾವಣಗೆರೆ ಜು.11: ಕುರುಬರ ಸಾಂಸ್ಕೃತಿಕ ಪರಿಷತ್ತು, ಬೆಂಗಳೂರು ಹಾಗೂ ದಾವಣಗೆರೆ ಜಿಲ್ಲಾ ಕುರುಬರ ಸಮಾಜದ ಎಲ್ಲಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜು.17ರ ಸಂಜೆ 3 ಗಂಟೆಗೆ ಕುರುಬರ ಸಾಂಸ್ಕೃತಿಕ ದರ್ಶನ ಮಾಲಿಕೆ ಮತ್ತು ಹದಿಮೂರು ಗ್ರಂಥಗಳ ಅನಾವರಣ ಕಾರ್ಯಕ್ರಮ ದಾವಣಗೆರೆಯಲ್ಲಿ ಆಯೋಜಿಸಲಾಗಿದೆ ಎಂದು ಕರುಬರ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಗರದ ವಿದ್ಯಾನಗರ ಮುಖ್ಯರಸ್ತೆಯಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಪುರಾಣ, ಧರ್ಮ, ಕಲೆ ಮತ್ತು ಕ್ರೀಡೆ, ಸಮಾಜೋ-ಆರ್ಥಿಕ, ಚಿತ್ರಕೋಶ, ಇತಿಹಾಸ, ಸಾಹಿತ್ಯ, ಮಹಿಳೆ, ಆಧುನಿಕತೆ, ಸಾಂಸ್ಕೃತಿಕ ಪದಕೋಶ ಇವುಗಳನ್ನು ಒಳಗೊಂಡ ಹದಿಮೂರು ಗ್ರಂಥಗಳ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಹರಿಹರ ಶಾಸಕರಾದ ಎಸ್. ರಾಮಪ್ಪ ಗ್ರಂಥಗಳ ಅನಾವರಣ ಮಾಡಲಿದ್ದು, ಎಚ್.ಎಂ. ರೇವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಕುಲಗುರುಗಳಾದ ಡಾ. ಉದಯ ಶಂಕರ ಒಡೆಯರ್, ಡಾ. ನಾ. ಲೋಕೇಶ ಒಡೆಯರ್, ಮತ್ತು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಜಿ. ದ್ಯಾಮಪ್ಪ ಪಾಲ್ಗೊಳ್ಳುತ್ತಾರೆ. ಮುಖ್ಯ ಅತಿಥಿಗಳಾಗಿ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ. ಎ.ಜಿ. ರಾಮಚಂದ್ರಪ್ಪ, ಡಾ. ದಾದಪೀರ್ ನವಿಲೇಹಾಳ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು
ಖ್ಯಾತ ಸಾಹಿತಿಗಳಾದಂತಹ ಎಸ್ ಜಿ ಸಿದ್ಧರಾಮಯ್ಯ, ಪ್ರೊ.ಲಿಂಗಣ್ಣ, ಡಾ. ಬಿ.ಕೆ ರವಿ, ದಿ. ಲಕ್ಕಪ್ಪಗೌಡ ಇವರ ಮಾರ್ಗದರ್ಶನದಲ್ಲಿ ಪಿಹೆಚ್ ಡಿ ಮಾಡುತ್ತಿದ್ದ ಅಭ್ಯರ್ಥಿಗಳ ಸಹಕಾರದಿಂದ ಈ ಸಂಪುಟಗಳು ರೂಪುಗೊಂಡಿವೆ ಎಂದು ಅವರು ಹೇಳಿದರು.
ಕರ್ಮಭೂಮಿ ದಾವಣಗೆರೆ
ನಮ್ಮ ಹೆಮ್ಮೆಯ ಜಾಗ ದಾವಣಗೆರೆ. ನಮ್ಮೆಲ್ಲ ಕಾರ್ಯ ಚಟುವಟಿಕೆಗಳಿಗೆ ಉತ್ತಮ ಫಲ ಕೊಟ್ಟಿರುವ ಜಾಗ ಈ ಕೇಂದ್ರ ಸ್ಥಾನ ದಾವಣಗೆರೆ ಆಗಿದೆ. ರಾಜ್ಯ ಮಟ್ಟದ ಕುರುಬ ಸಮಾಜದ ಸಮಾವೇಶವೂ ಇಲ್ಲೇ ಆಗಿತ್ತು ಇದಾದ ನಂತನ ಸಿದ್ದರಾಮಯ್ಯನವರೂ ಮುಖ್ಯಮಂತ್ರಿಯಾದರು. ಇದಲ್ಲದೇ ಅನೇಕ ಹೋರಾಟಗಳನ್ನು ದಾವಣಗೆರೆಯಿಂದ ಪ್ರಾರಂಭ ಮಾಡಿ ಯಶಸ್ವಿಯಾಗಿದ್ದು, ನಮ್ಮ ಹೆಮ್ಮೆಯ ಜಾಗವಾಗಿದೆ ಎಂದು ಎಚ್.ಎಂ. ರೇವಣ್ಣ ತಿಳಿಸಿದರು.
ಸಮಾಜದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಸಂಘಟನಾತ್ಮಕವಾಗಿ ಸಮಾಜ ಬೆಳೆಯುವ ನಿಟ್ಟಿನಲ್ಲಿ ಪರಿಷತ್ತು ಸಾಕಷ್ಟು ಕೆಲಸ ಮಾಡುತ್ತ ಬಂದಿದ್ದು, ಸಂಘಟನಾತ್ಮಕವಾಗಿ ಬೆಳೆಯುವ ಮೂಲಕ ಜನಮೆಚ್ಚುವ ನಾಯಕ ಸಿದ್ಧರಾಮಯ್ಯನವರನ್ನು ನೀಡಿರುವ ಕೀರ್ತಿ ಕುರುಬ ಸಮಾಜದ್ದಾಗಿದೆ. ಇದೇ ರೀತಿ ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್ತು ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದರು.
ಸಾಂಸ್ಕೃತಿಕ ರಂಗದಲ್ಲಿ ಸಮಾಜವನ್ನು ಬೆಳೆಸುವ ಮತ್ತು ಮಹಿಳೆಯರ, ಯುವಕರ ಸಂಘಟನೆಯ ದೃಷ್ಠಿಯಿಂದ ಕುರುಬರ ಸಾಂಸ್ಕೃತಿಕ ಪರಿಷತ್ತನ್ನು 2008ರಲ್ಲಿ ಸ್ಥಾಪಿಸಲಾಯಿತು. ಸಮಾಜದ ಎಲ್ಲ ಆಗುಹೋಗುಗಳನ್ನು, ನಡೆದು ಬಂದ ದಾರಿಯನ್ನು 15 ಸಂಪುಟಗಳಲ್ಲಿ ಸಾರಸ್ವತ ಲೋಕಕ್ಕೆ ಕೊಡಬೇಕೆಂಬ ಚಿಂತನೆಯ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದ್ದು, ಸಮಾಜದ ಎಲ್ಲ ಪ್ರಮುಖರ ಮನೆಯಲ್ಲಿ ಈ ಸಂಪುಟಗಳು ಇರಬೇಕು ಎಂಬುದು ಪರಿಷತ್ತಿನ ಆಶಯವಾಗಿದೆ ಎಂದರು.
ಸಾಂಸ್ಕೃತಿಕ ಪರಿಷತ್ತಿನ ಅಡಿಯಲ್ಲಿ ಮಹಿಳೆಯರ ಸಂಘಟನೆಗಾಗಿ ಬೀದರ್, ತುಮಕೂರು, ಬೆಂಗಳೂರು ಹಾಗೂ ಕೋಲಾರದಲ್ಲಿ ನಾಲ್ಕು ಕಮ್ಮಟಗಳನ್ನು ಎರಡು ದಿನದ ಅವಧಿಗೆ ಮಾಡಿದ್ದೇವೆ. ಅಲ್ಲದೆ ನಮ್ಮ ಸಮುದಾಯದ 180ಜನ ಪಿ ಹೆಚ್ ಡಿ ಮಾಡುತ್ತಿರುವ ಮತ್ತು ಮಾಡಿರುವ ಅಭ್ಯರ್ಥಿಗಳ ಕಮ್ಮಟವನ್ನೂ ಮಾಡಲಾಗಿದೆ. ಈ ರೀತಿಯಾಗಿ ಸಮಾಜದ ಸಾಂಸ್ಕೃತಿಕ ಪರಿಷತ್ತುಸಾರಸ್ವತ ಲೋಕಕ್ಕೆ ವಿಶೇಷವಾದ ಕೊಡುಗೆಗಳನ್ನು ಕೊಡುತ್ತಾ ಬಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ ಎಮ್ ಸತೀಶ್, ಪ್ರೊ. ಯಲ್ಲಪ್ಪ, ಪಿ.ರಾಜಕುಮಾರ್, ಇಟ್ಟಿಗುಡಿ ಮಂಜುನಾಥ್, ಜಯಣ್ಣ, ಎಸ್ ಟಿ ಅರವಿಂದ್, ಎಸ್. ಎಸ್. ಗಿರೀಶ್, ಬಿ.ಲಿಂಗರಾಜ್, ರೇವಣ್ಣ ಕಣ್ಣಾವರ್, ಕರಿಬಸವಯ್ಯ ಗೋಣಿಮಠದ, ಎಂ. ಎಚ್. ಶ್ರೀನಿವಾಸ್, ಮಂಜುನಾಥ್ ಇತರರು ಇದ್ದರು.