ಸುದ್ದಿ360 ದಾವಣಗೆರೆ.ಜು.01: ಬೆಂಗಳೂರಿನ ವಸಂತನಗರದಲ್ಲಿರುವ ಬಂಜಾರ ಭವನದಲ್ಲಿ ಜು.17ರಂದು ರಾಜ್ಯ ಮಟ್ಟದ ಬಂಜಾರ ವಧುವರರ ಅನ್ವೇಷಣೆ ಮತ್ತು ಬಂಜಾರ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ ಲಂಬಾಣಿ ಜನಸೇವಾ ಸಂಘದ ರಾಜ್ಯಾಧ್ಯಕ್ಷ ಎ.ಆರ್. ಹನುಮಂತ ನಾಯ್ಕ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಬಂಜಾರ ಲಂಬಾಣಿ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಈ ಜಿಲ್ಲೆಗಳೂ ಸೇರಿ, ಶಿವಮೊಗ್ಗ, ತುಮಕೂರು, ಹಾಸನ, ಬಿಜಾಪುರ ಜಿಲ್ಲೆಗಳ ಸಮುದಾಯದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಂಘದ ಮುಖಂಡ ನಂಜಾ ನಾಯ್ಕ ಮಾತನಾಡಿ, ಬಂಜಾರ ಸಮಾಜದ ಸಂಸ್ಕೃತಿ, ಇತಿಹಾಸವನ್ನು ಪರಿಚಯಿಸುವ ಮೂಲಕ ಮತಾಂತರ ತಡೆಯುವ ಉದ್ದೇಶದಿಂದ ವಧುವರರ ಅನ್ವೇಷಣೆ ಕಾರ್ಯಕ್ರಮದ ಜತೆ ಬಂಜಾರ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಜನ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮತಾಂತರದ ಮೋಸದ ಜಾಲಕ್ಕೆ ಸಿಲುಕದಿರಿ
ಸಮುದಾಯದ ಜನರಿಗೆ ಮಾರಿಯಮ್ಮ ಆರಾಧ್ಯ ದೇವತೆ. ಮಾರಿಯಮ್ಮನೇ ಮೇರಿ ಮಾತೆ ಎಂದು ದಿಕ್ಕು ತಪ್ಪಿಸುವ ಮೂಲಕ ಮತಾಂತರ ಮಾಡಲಾಗುತ್ತಿದೆ. ಈ ವೇಳೆ ಹಣ, ಚಿನ್ನದ ಉಂಗುರ ನೀಡಿ ಬಂಜಾರ ಸಮುದಾಯದವರನ್ನು ಸೆಳೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯದ ಜನ ಜಾಗೃತರಾಗಬೇಕು. ಮತಾಂತರದ ಮೋಸದ ಜಾಲಕ್ಕೆ ಬಲಿಯಾಗಬಾರದು ಎಂದು ಹನುಮಂತ ನಾಯ್ಕ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಶಿಕುಮಾರ್, ಶೀತಲ್, ಸಂದೇಶ್, ಅರುಣ್‌ಕುಮಾರ್, ಕುಮಾರ್ ನಾಯ್ಕ ಇದ್ದರು.