ಸುದ್ದಿ360, ಬೆಂಗಳೂರು, ಜು.18: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ಪತಂಜಲಿ ಯೋಗ ಫೌಂಡೇಶನ್ ವತಿಯಿಂದ ಜುಲೈ, 20 ರಿಂದ 24 ರವರೆಗೆ ನಗರದ 8 ಕಡೆಗಳಲ್ಲಿ ಯೋಗ ಜೀವನ ದರ್ಶನ-2022 ಹಮ್ಮಿಕೊಳ್ಳಲಾಗಿದೆ ಎಂದು ಯೋಗ ಫೌಂಡೇಶನ್ನಿನ ಸಂಚಾಲಕ ಟಿ.ವಿ.ವಿ ಸತ್ಯನಾರಾಯಣ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗ ವಿದ್ಯೆಯ ಮುಖಾಂತರ ಸಮಾಜವನ್ನು ಪುಷ್ಟೀಕರಿಸುವ ಕಾರ್ಯವನ್ನು ಮಾಡುತ್ತಿರುವ ಸಂಘಟನೆಯಾಗಿದೆ. ಅಂತಾರಾಷ್ಟ್ರ-ರಾಷ್ಟ್ರ-ರಾಜ್ಯ ಮಟ್ಟದ ಯೋಗ ಶಿಕ್ಷಕರ ಪ್ರಾಂತ ಪ್ರಶಿಕ್ಷಣ ಶಿಬಿರಗಳನ್ನು ಆಯೋಜಿಸಿದ್ದು, ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನ, ನಿಮಿಷಾಂಭ ಸಮುದಾಯ ಭವನ, ಕರ್ನಾಟಕ ರಾಜ್ಯ ಸರ್ಕಾರಿ ನೌಕಕರ ಸಮುದಾಯ ಭವನದಲ್ಲಿ ಶಿಬಿರಗಳು ಜರುಗಲಿದ್ದು, ಜು.20ರಂದು ಸಂಜೆ 6ಕ್ಕೆ ಏಕಕಾಲದಲ್ಲಿ ಶಿಬಿರ ನಡೆಯುವ ಎಲ್ಲಾ ಸ್ಥಳಗಳಲ್ಲಿ ಉದ್ಘಾಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಾಪೂಜಿ ಬ್ಯಾಂಕ್ ಸಮುದಾಯದಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಶಿಬಿರ ಉದ್ಘಾಟಿಸಲಿದ್ದಾರೆ. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ಕುರ್ಕಿ ಆಗಮಿಸಲಿದ್ದಾರೆ. ನಿಮಿಷಾಂಭ ಸಮುದಾಯ ಭವನದಲ್ಲಿ ಶಿಕ್ಷಣ ಪ್ರಮುಖ ಶಾಂತಾ ಕೃಷ್ಣರ್, ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕಲ್ಲೇಶಣ್ಣ, ಗಿರೀಶಣ್ಣ, ಡಿಎಓ ಡಾ.ಶಂಕರಗೌಡ್ರು, ಬಾಲ ಸುಬ್ರಹ್ಮಣ್ಯ ಅಣ್ಣ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜು.21ರಂದು ಸಂಜೆ 6ರಿಂದ ಭಜನ ಮತ್ತು ಸತ್ಸಂಗ ನಡೆಯಲಿದೆ. ಜು.22ರಂದು ಸಂಜೆ 6ಕ್ಕೆ ಲಲಿತಾ ಸಹಸ್ರನಾಮ ಹಾಗೂ ಮಾತೃಭೋಜನ ನಡೆಯಲಿದೆ. 23ಕ್ಕೆ ಸಂಜೆ 5ಕ್ಕೆ ಯೋಗ ನಡಿಗೆ ಆರೋಗ್ಯದೆಡೆಗೆ ಕಾರ್ಯಕ್ರಮ ನಡೆಯಲಿದೆ. ಎಸ್ಪಿ ಸಿ.ಬಿ.ರಿಷ್ಯಂತ್ ಉದ್ಘಾಟಿಸುವರು. ಸಿದ್ಧಣ್ಣಗೌಡ ಅಧ್ಯಕ್ಷತೆ ವಹಿಸುವರು. ಜು.24ರ ಬೆಳಗ್ಗೆ 11.30ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ದಾವಣಗೆರೆ ನಗರದಲ್ಲಿ 2008ರಿಂದ ಪ್ರಾರಂಭವಾದ ಸಮಿತಿಯು ಅನೇಕ ಬಡಾವಣೆಯಲ್ಲಿ 40ಕ್ಕೂ ಹೆಚ್ಚು ಶಾಖೆಗಳ ಮೂಲಕ ನಾಗರೀಕರಿಗೆ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಾ ಬಂದಿದೆ. ಈಗಾಗಲೇ 350 ಜನರು ನೊಂದಣಿ ಮಾಡಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್.ಹೆಚ್ ಕಲ್ಲೇಶ್, ಲೀಲಾವತಿ, ಭಾರತಿ ಬಿ.ಎಸ್, ವೀರಭದ್ರಪ್ಪ, ರುದ್ರಪ್ಪ, ಆರ್ ಸಿದೇಶಪ್ಪ ಇತರರು ಇದ್ದರು.