ಸುದ್ದಿ360 ದಾವಣಗೆರೆ.ಜು.06: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಜು.8ರಂದು ಜರುಗಲಿದೆ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಎಸ್ ಗುರುಮೂರ್ತಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮಾರ್ಚ್ 25ರಂದು ನಡೆದ ರಾಜ್ಯ ಪರಿಷತ್ತಿನ ಮಹಾಸಭೆಯಲ್ಲಿನ ನಿರ್ಣಯದಂತೆ ಸುವರ್ಣ ಮಹೋತ್ಸವವು ಬೆಂಗಳೂರಿನ ವಿಜಯನಗರದ ಎಂ.ಸಿ. ಲೇಔಟ್ ನ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಸಮೀಪದ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಆದಿಚುಂಚನಗಿರಿಯ ಡಾ. ನಿರ್ಮಲಾನಂದ ಶ್ರೀ, ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗಶ್ರೀಗಳು ಕಾರ್ಯಕ್ರಮದ ಸಾನಿಧ್ಯ ವಲಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ನೆರವೇರಿಸುವರು. ವಸತಿ ಸಚಿವ ವಿ.ಸೋಮಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ. ಅಶ್ವತ್ಥ ನಾರಾಯಣ, ಕೆ. ಗೋಪಾಲಯ್ಯ, ಮುನಿರತ್ನ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಭಾಗವಹಿಸಲಿದ್ದಾರೆ.
ನಿವೃತ್ತ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮತ್ತು 80 ವರ್ಷ ವಯೋಮಿತಿ ಮೀರಿದ ನೌಕರರಿಗೆ ಸನ್ಮಾನಿಸಲಾಗುವುದು ಎಂದು ಗುರುಮೂರ್ತಿ ತಿಳಿಸಿದರು.