ಸುದ್ದಿ360 ದಾವಣಗೆರೆ.ಜು.07: ಶ್ರೀ ಮದ್ ರಂಭಾಪುರಿ ಜಗದ್ಗುರುಗಳ ಹಾಗೂ ಶ್ರೀ ಹಿಮವತ್ಕೇದಾರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪರಂಪರೆ ಪುನರ್‌ಮನನ ಧರ್ಮ ಸಮಾರಂಭ ಹಾಗೂ ಶ್ರೀ ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಸಮಾರಂಭ ಜು.9 ಮತ್ತು 10ರಂದು ನಗರದ ಪಿಬಿ ರಸ್ತೆಯ ತ್ರಿಶೂಲ್ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೂಜಾ ಸಮಿತಿ ಸದಸ್ಯರು, ಧೂಡ ಅಧ್ಯಕ್ಷರೂ ಆದ ಕೆ.ಎಂ. ಸುರೇಶ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಧುನಿಕತೆಯ ಇಂದಿನ ದಿನಮಾನಗಳಲ್ಲಿ ಕೂಡು ಕುಟುಂಬದ ಪರಿಕಲ್ಪನೆ ಮರೆಯಾಗಿದ್ದು, ಪತಿ, ಪತ್ನಿ ಮಗು ಇರುವ ಚಿಕ್ಕ ಸಂಸಾರಗಳು ಹೆಚ್ಚಾಗಿವೆ. ತಂದೆ- ತಾಯಿ ಇಬ್ಬರೂ ಹೊರಗೆ ದುಡಿಯಲು ಹೋಗುವುದರಿಂದ ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ, ಸಂಸ್ಕೃತಿ ಹೇಳಿಕೊಡುವ ಹಿರಿಯರು ಇಲ್ಲವಾಗಿದೆ. ಈ ನಿಟ್ಟಿನಲ್ಲಿ ದೇಶದ ಸಂಸ್ಕೃತಿ, ಪರಂಪರೆಯ ಪುನರ್‌ಮನನ ಮಾಡಿಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜು.9ರಂದು ಸಂಜೆ 5 ಗಂಟೆಗೆ ಧರ್ಮ ಕಂಕಣ ಧಾರಣೆ, 5.30ಕ್ಕೆ ಧ್ವಜ ಸಂಕಲ್ಪ, 5.50ಕ್ಕೆ ಉಭಯ ಧರ್ಮಗುರುಗಳ ಧರ್ಮ ಧ್ವಜಾರೋಹಣ ಹಾಗೂ ಧ್ವಜವಂದನೆ ನೆರವೇರಲಿದೆ. ಸಂಜೆ 6 ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ರಂಭಾಪುರಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀ ಹಿಮವತ್ಕೇದಾರ ಜಗದ್ಗುರು ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯಸಭೆ ಸದಸ್ಯ, ಚಿತ್ರನಟ ಜಗ್ಗೇಶ್ ಧರ್ಮಸಭೆ ಉದ್ಘಾಟಿಸುವರು. ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಸ್ವಾಮಿಗಳು ಉಪದೇಶಾಮೃತ ನೀಡುವರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಸಂಸದ ಜಿ.ಎಂ.ಸಿದ್ದೇಶ್ವರ ಭಗವಹಿಸುವರು. ಸನಾತನ ಧರ್ಮ ಪರಂಪರೆ ಮತ್ತು ಮೌಲ್ಯಗಳು ಕುರಿತು ಜಿಲ್ಲಾಕಾರಿ ಮಹಾಂತೇಶ ಬೀಳಗಿ ಉಪನ್ಯಾಸ ನೀಡುವರು.
ಜು.10ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಹಿಮವತ್ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನಡೆಯಲಿದ್ದು, ರಂಭಾಪುರಿ ಶ್ರೀಗಳು, ಕಣ್ವಕುಪ್ಪೆ ಶ್ರೀಗಳು ಮತ್ತು ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಜ್ಜಂಪುರಶೆಟ್ರು ಮೃತ್ಯುಂಜಯ, ಕೆ.ಆರ್. ಶಿವಕುಮಾರ್, ಮಳಲಕೆರೆ ಗುರುಮೂರ್ತಿ, ಎನ್. ಮಲ್ಲನಗೌಡ, ಎನ್. ರಾಜಶೇಖರ್, ಕಡೇಕೊಪ್ಪ ನಾಗಭೂಷಣ್, ಟಿ.ಎಚ್.ಎಂ. ವೀರೇಶ್, ಅರುಣ್ ಮುದ್ದಳ್ಳಿ, ಕಲ್ಲೇಶ್, ಧನುಷ್ ಇತರರು ಇದ್ದರು.