ಡಿ. 31ರಂದು ‘ದವನ್ ಕಾರ್ನಿವಲ್-2022’

ಸುದ್ದಿ360  ದಾವಣಗೆರೆ ಡಿ.27: ಇಲ್ಲಿನ ದವನ್‌ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ ಡ್ ಮ್ಯಾನೇಜ್‍ಮೆಂಟ್‍ ಸ್ಟಡೀಸ್ ವತಿಯಿಂದ ‘ದವನ್ ಕಾರ್ನಿವಲ್ – 2022’ ನ್ನು ನಗರದ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಡಿ. 31ರ ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ  ಉಪಪ್ರಾಂಶುಪಾಲರಾದ ಅನಿತಾ ಎನ್. ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿದ್ಯಾರ್ಥಿಗಳಲ್ಲಿ, ವಾಣಿಜ್ಯ ಮತ್ತು ನಿರ್ವಹಣಾ ಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ಈ ಯುವ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಆಟದ ಮಳಿಗೆಗಳ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಈ ಉತ್ಸವದಲ್ಲಿ ವಿದ್ಯಾರ್ಥಿಗಳು  ವ್ಯಾಪಾರ ವಹಿವಾಟುಗಳಲ್ಲಿ ತೊಡಗಲಿದ್ದಾರೆ.

ಪ್ರತಿ ತರಗತಿಗಳಿಂದ ಒಂದು ತಂಡದಂತೆ ಒಟ್ಟು 16ತಂಡಗಳಿಗೆ 16 ಮಳಿಗೆಗಳನ್ನು ನೀಡಲಾಗಿದೆ. ಪ್ರತಿ ಮಳಿಗೆಯಲ್ಲೂ ತಲಾ ಎರಡು ಭಾಗಗಳು ಒಂದು ಆಹಾರ ನಿರ್ವಹಣೆಗೆ ಹಾಗೂ ಆಟಗಳ ಮಳಿಗೆ. 16 ತಂಡಗಳಿಗೆ ಭಿನ್ನ ಸಂಸ್ಕೃತಿಯ ಆಹಾರ ತಯಾರಿಕೆ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಆಯವ್ಯಯ ಮಂಡನೆ, ವ್ಯಾಪಾರ ವಹಿವಾಟಿನ ಮಾಹಿತಿ, ವ್ಯವಹಾರ ಜ್ಞಾನ ಹಾಗೂ ನಿರ್ವಹಣಾ ಸಾಮರ್ಥ್ಯ, ಮಾರಾಟದ ರೂಪುರೇಷೆ ಮತ್ತು ವಿಧಾನಗಳ ಕಲಿಕೆಗೆ ಈ ಕಾರ್ನಿವಲ್ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಆಹಾರ ಸಮಿತಿ ಕ್ರೀಡಾ ಸಮಿತಿ, ನಿರ್ವಹಣಾ ಸಮಿತಿ, ಶಿಸ್ತುಪಾಲನಾ ಸಮಿತಿಗಳು ವಿದ್ಯಾರ್ಥಿಗಳಿಂದಲೇ ನಿರ್ವಹಿಸಲ್ಪಡುತ್ತದೆ. 16 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಮಳಿಗೆಗಳಲ್ಲಿ ಗಳಿಸಿದ ಮೊತ್ತದಲ್ಲಿ ಒಂದು ಭಾಗವನ್ನು ವಿದ್ಯಾರ್ಥಿಗಳು ಸಾಮಾಜಿಕ ನಿಧಿಗೆ ಮೀಸಲಿಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಕಾರ್ಯವನ್ನು ಸಹ ಹಮ್ಮಿಕೊಳ್ಳುತ್ತಿದ್ದಾರೆ ಎಂದರು.

ಅಂದು ಮಧ್ಯಾಹ್ನ 12.30ಕ್ಕೆ ಉದ್ಘಾಟನೆ ನೆರವೇರಲಿದ್ದು, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವೀರೇಶ್ ಪಾಟೀಲ್, ನಿರ್ದೇಶಕ ಹರ್ಷರಾಜ್ ಎ. ಗುಜ್ಜರ್, ಪ್ರಾಂಶುಪಾಲರಾದ ಡಾ. ಜಿ.ಎಸ್. ಅಂಜು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ನಿವಾಲ್ ನಲ್ಲಿ ವಿದ್ಯಾರ್ಥಿಗಳು, ಪಾಲಕರು, ಮತ್ತು ಪೋಷಕರು ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 2.00 ರಿಂದ 4 ಗಂಟೆಯವರೆಗೆ ಸಾರ್ವಜನಿಕರಿಗೆ ಆಹಾರ ಮತ್ತು ಆಟದ ಮಳಿಗೆಗಳಿಗೆ ಪ್ರವೇಶವಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಹರೀಶ್‍ ತಿಗರಿ, ಮಧುಕುಮಾರ್, ಅರುಣ್ ಚೌಹಾಣ್ ಎಲ್., ಬಸವರಾಜ್ ಪಾಟೀಲ್ ಜಿ.ವಿ. ಹಾಗೂ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!