ಸುದ್ದಿ360 ಸಿನೆಮಾ: ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ ಪವನ್ ಕಲ್ಯಾಣ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ಒಂದನ್ನು ದಾಖಲಿಸಿದ್ದಾರೆ. ಹಾಗಂತ ಪವನ್ ಏನು ಅಪರಾಧ ಮಾಡಿಲ್ಲ. ಆದರೆ ಕಾರಿನ ಮೇಲೆ ಸ್ಟಂಟ್ ಮಾಡಿದ್ದಕ್ಕಾಗಿ ಪವನ್ ಕಲ್ಯಾಣ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಅಪಾಯಕಾರಿ ಸ್ಟಂಟ್ಗಳನ್ನು ಮಾಡಬೇಡಿ ಎಂದು ಯುವಜನತೆಗೆ, ಸಮಾಜಕ್ಕೆ ತಿಳಿ ಹೇಳುವ ಸ್ಥಾನದಲ್ಲಿರುವ ಒಬ್ಬ ಸ್ಟಾರ್ ಸೆಲೆಬ್ರಿಟಿ ಆಗಿದ್ದುಕೊಂಡು ಪವನ್ ಕಲ್ಯಾಣ್ ಈ ರೀತಿ ಮಾಡಿರುವುದು ಬೇಜವಾಬ್ದಾರಿತನ ಎಂದು ಪರಿಗಣಿಸಿರುವ ಪೊಲೀಸರು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ತೆಲುಗು ಚಿತ್ರರಂಗದ ಖ್ಯಾತ ನಟರಾಗಿರುವ ಪವನ್ ಕಲ್ಯಾಣ್ ಜನ ಸೇವಾ ರಾಜಕೀಯ ಪಕ್ಷದ ಅಧ್ಯಕ್ಷರು ಕೂಡ ಹೌದು. ಈ ಹಿಂದೆ ಪಕ್ಷದ ಉದ್ಘಾಟನೆ ಸಂದರ್ಭದಲ್ಲಿ ಹಿಂದೆಂದೂ ಕಂಡರೆಯದಷ್ಟು ಜನ ಸೇರಿದ್ದು ಅವರ ಫ್ಯಾನ್ ಫಾಲೋಯಿಂಗ್ ಗೆ ಸಾಕ್ಷಿಯಾಗಿತ್ತು.
ಇಷ್ಟೊಂದು ಫ್ಯಾನ್ ಫಾಲೋಯಿಂಗ್ ಹೊಂದಿರುವ ಪವನ್ ಕಲ್ಯಾಣ್, ಶನಿವಾರ ಬೆಳಗ್ಗೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಇಪ್ಪತ್ತಮ್ ಗ್ರಾಮಕ್ಕೆ ಹೊರಟಿದ್ದರು. ರಸ್ತೆ ವಿಸ್ತರಣೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ಥರ ಬೇಟಿಗೆ ತೆರಳುತ್ತಿದ್ದ ನಟ ಪವನ್ ಕಲ್ಯಾಣ್, ಕಾರಿನ ಮೇಲೆ ಕುಳಿತ ವಿಡಿಯೋ ಒಂದು ವೈರಲ್ ಆಗಿತ್ತು. ಇದೇ ವೇಳೆ ಪವನ್ ಸಾಗುತ್ತಿದ್ದ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪಿ. ಶಿವಕುಮಾರ್ ಎಂಬುವರ ಬೈಕ್ ನಿಯಂತ್ರಣ ತಪ್ಪಿದೆ. “ಪವನ್ ಕಲ್ಯಾಣ್ ಇದ್ದ ಕಾರು ಚಾಲಕ ರ್ಯಾಶ್ ಡ್ರೈವಿಂಗ್ ಮಾಡುತ್ತಿದ್ದರು. ಪವನ್ ಕಾರಿನ ಮೇಲೆ ಕುಳಿತಿದ್ದರು. ಅವರ ಹಿಂದೆ ಬರುತ್ತಿದ್ದ ಬೆಂಬಲಿಗರ ವಾಹನಗಳು ಬೇಕಾಬಿಟ್ಟಿಯಾಗಿ ಚಲಿಸುತ್ತಿದ್ದವು. ಇದರಿಂದ ನನಗೆ ಮಾತ್ರವಲ್ಲದೆ ಅಲ್ಲಿದ್ದ ಇತರೆ ವಾಹನ ಚಾಲಕರು, ಸವಾರರು, ಸಾರ್ವಜನಿಕರಿಗೂ ತೊಂದರೆ ಆಗಿದೆ ಎಂದು ದೂರುದಾರ ಶಿವಕುಮಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಒಬ್ಬ ಸೆಲೆಬ್ರಿಟಿ, ಸೂಪರ್ ಸ್ಟಾರ್ ಹಾಗೂ ಜನಸೇವಕರಾಗಿರುವ ಪವನ್ ಕಲ್ಯಾಣ್ ರಸ್ತೆಯಲ್ಲಿ ಸಾಗುವಾಗ ಜವಾಬ್ದಾರಿಯಿಂದ ವರ್ತಿಸಿಲ್ಲ ಎಂದು ಶಿವಕುಮಾರ್ ದೂರಿನಲ್ಲಿ ವಿವರಿಸಿದ್ದಾರೆ. ಇದೇ ವೇಳೆ ಪವನ್ ಕಲ್ಯಾಣ್ ಕಾರಿನ ಮೇಲೆ ಕುಳಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ನೆಟ್ಟಿಗರು, ಜಾಲತಾಣಿಗರು ಕೂಡ ಪವನ್ ಕಲ್ಯಾಣ್ ರ ವರ್ತನೆಗೆ ಬೇಸರ, ಆಕ್ರೋಶ ವ್ಯಕ್ತಪಡಿಸಿದ್ದಾರೆ.