ಸುದ್ದಿ360 ದಾವಣಗೆರೆ ಮಾ.14: ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಅರೆ ಬರೆಯಾಗಿದೆ. ಸರ್ವಿಸ್ ರಸ್ತೆಗಳೇ ಪೂರ್ಣಗೊಂಡಿಲ್ಲ. ಹೀಗಿರುವಾಗ ಟೋಲ್ ಸಂಗ್ರಹ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದಶಪಥ ರಸ್ತೆ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಸರ್ವಿಸ್ ರಸ್ತೆಗಳು ನಿರ್ಮಾಣವಾಗಿಲ್ಲ. ಅಲ್ಲಿನ್ನು ಬೈಪಾಸ್, ಹಲವು ಅಂಡರ್ ಪಾಸ್ ಕಾಮಗಾರಿಗಳೂ ಆಗಿಲ್ಲ. ಇದರಿಂದ ಅಲ್ಲಿನ ಸುತ್ತಮುತ್ತಲಿನ ಹಳ್ಳಿಜನರು ಬಹಳಷ್ಟು ತೊಂದರೆಗೆ ಈಡಾಗುತ್ತಾರೆ. ಅಲ್ಲದೆ ಪೂರ್ಣಗೊಳ್ಳದ ರಸ್ತೆಗೆ ಜನರು ಟೋಲ್ ತೆರಬೇಕಾಗುತ್ತದೆ. ಚುನಾವಣೆ ಕಾರಣಕ್ಕೆ ತರಾತುರಿಯಲ್ಲಿ ಪ್ರಧಾನಮಂತ್ರಿಯನ್ನು ಕರೆಸಿ ಉದ್ಘಾಟನೆ ಮಾಡಿಸಿದ್ದಾರೆ ಎಂದರು. ಬೆಂಗಳೂರು-ಮೈಸೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿದವರು ನಾವು, ದಶಪಥ ರಸ್ತೆ ಯೋಜನೆಗೆ ಅನುಮೋದನೆ ಮಾಡಿದ್ದು ನಾವು. ನಾವು ಮಾಡಿದ ಕೆಲಸವನ್ನು ಅವರು ಉದ್ಘಾಟನೆ ಮಾಡಿದ್ದಾರೆ ಎಂದು ಹೇಳಿದರು.