ದಾವಣಗೆರೆಯಲ್ಲಿ ಜೂ.12ರ ರಾತ್ರಿ ೧೦ಗಂಟೆವರೆಗೆ ನಿಷೇಧಾಜ್ಞೆ

ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ: ಎಸ್‌ಪಿ

ದಾವಣಗೆರೆ, ಜೂ.11: ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ (ಜೂ.12) ರಾತ್ರಿ 10 ಗಂಟೆವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರವಾದಿ ಮೊಹಮ್ಮದರ ವಿರುದ್ಧ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಶುಕ್ರವಾರ ಸಂಜೆಯಿಂದಲೇ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾತ್ರಿಯಿಡೀ ಗಸ್ತು ನಡೆಸಿದ್ದಾರೆ. ಶನಿವಾರ ಕೂಡ ಹಗಲು ಮತ್ತು ರಾತ್ರಿ ಪಾಳಿ ಸಿಬ್ಬಂದಿಗಳು ಕ್ರಮವಾಗಿ ಗಸ್ತು ನಡೆಸಿದ್ದಾರೆ. ಈಗಾಗಲೇ ಒಂದು ಕೆಎಸ್‌ಆರ್‌ಪಿ ತುಕಡಿ ಕರೆಸಿದ್ದು, ಜಿಲ್ಲಾ ಸಶಸ್ತ್ರ ಪಡೆ ಸಿಬ್ಬಂದಿಯನ್ನೂ ಭದ್ರತೆಗೆ ಬಳಸಿಕೊಳ್ಳುವ ಮೂಲಕ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ನಗರದಲ್ಲಿ ಸೂಕ್ತ ದಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೆ ಪೊಲೀಸ್ ಠಾಣೆ ಹಾಗೂ ಸರ್ಕಲ್ ವ್ಯಾಪ್ತಿಗಳಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ. ಮುಂದಿನ ಎರಡು ದಿನ ಎಲ್ಲಾ ಅಧಿಕಾರಿಗಳು ನಗರದೆಲ್ಲೆಡೆ ಸಂಚರಿಸಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಯಾವುದೇ ಸ್ಥಳದಲ್ಲಿ ಸೂಕ್ಷ್ಮತೆ ಕಂಡುಬಂದರೂ ಕೂಡಲೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದರು.

admin

admin

Leave a Reply

Your email address will not be published. Required fields are marked *

error: Content is protected !!