ದಾವಣಗೆರೆಯಲ್ಲಿ ಮೈನವಿರೇಳಿಸಿದ ಜಲಯೋಗ ಪ್ರದರ್ಶನ

ಸುದ್ದಿ360 ದಾವಣಗೆರೆ ಜೂ.21: 8ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಗರದ ಆಫಿಸರ್ಸ್‍ ಕ್ಲಬ್‍ ಈಜುಕೊಳ ಇಂದು ಕಳೆಗಟ್ಟಿತ್ತು. ಯೋಗಪಟುಗಳ ವಿವಿಧ ಭಂಗಿಗಳು ನೋಡುಗರ  ಮೈನವಿರೇಳಿಸುವಂತಿದ್ದವು.

26 ಜನ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಏಳು ವರ್ಷದ ಬಾಲಕಿ ಮಿಥಿಲಾ ಗಿರೀಶ್  ಹಾಗೂ 82 ವರ್ಷದ ವೃದ್ಧೆ ಇಂದಿರಾ ಸೇರಿದಂತೆ ಯೋಗಪಟುಗಳ ತಂಡ ನೀಡಿದ ಜಲ ಯೋಗ ಪ್ರದರ್ಶನ ವೀಕ್ಷಿಸುವ ಯೋಗಾಯೋಗ ನೋಡಗರದ್ದಾಗಿತ್ತು.

ಇಂತಹ ಒಂದು ಅವಿಸ್ಮರಣೀಯ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಯೋಗ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು.  ಜಲ ಯೋಗ ಕಾರ್ಯಕ್ರಮದಲ್ಲಿ ಜಲಯೋಗ ಪರಿಣಿತ  ಸಾಗರದ ಹರೀಶ್ ಡಿ. ನವಾಥೆ ಅವರ ನೇತೃತ್ವದ ಭೀಮನ ಕೋಣೆ ತಂಡದ ಎನ್.ಪಿ. ಗಂಗಾಧರ, ಇಂದಿರಾ, ಮಿಥಿಲಾ ಗಿರೀಶ್, ಸಂಪದ, ಆದಿತ್ಯ, ಸಂಧ್ಯ, ಮಮತ, ಜ್ಯೋತಿ, ವಿನಯ್ ಸೇರಿದಂತೆ ಒಟ್ಟು 26 ಜನ ಯೋಗಪಟುಗಳು ಲೀಲಾಜಾಲವಾಗಿ ಜಲಯೋಗ ಪ್ರದರ್ಶನ ನೀಡಿ ನೋಡುಗರ ಮೆಚ್ಚುಗೆಗೆ ಪಾತ್ರರಾದರು.

ಪದ್ಮಾಸನ, ಪದ್ಮ ಚಕ್ರ, ಕಾಲ ಚಕ್ರ, ವೆಲ್ಲಿಪಳ್ಳಿ, ಟ್ರೈನ್, ಬೋಟ್ ಸ್ಟ್ರೋಕ್, ಜಲ ವಾಚನ ಆಸನ ಸೇರಿದಂತೆ ವಿವಿಧ ಆಸನಗಳನ್ನು ಯೋಗಪಟುಗಳು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ಇಂದು ಚನ್ನಗಿರಿ ತಾಲೂಕಿನ ಐತಿಹಾಸಿಕ ತಾಣ ಸಂತೇಬೆನ್ನೂರಿನ ಪುಷ್ಕರಿಣಿಯಲ್ಲಿ ನಡೆದ ಯೋಗ ಪ್ರದರ್ಶನಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ತಂದೆ-ತಾಯಂತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಕಾರಣದಿಂದ ಫಾದರ್ಸ್‍ ಡೇ, ಮದರ್ಸ್‍ ಡೇ ಇವು ಹೆಚ್ಚು ಹೆಚ್ಚಾಗಿ ಆಚರಣೆಗೆ ಬರುತ್ತಿವೆ. ನಮ್ಮದು ಇಂತಹ ಸಂಸ್ಕೃತಿಯಲ್ಲ.  ಬದಲಿಗೆ, ಕುಟುಂಬ ವ್ಯವಸ್ಥೆಯನ್ನು ಜಗತ್ತಿಗೆ ಕೊಡುಗೆ ನೀಡಿದ ಕೀರ್ತಿ ಭಾರತದ್ದು ಎಂದು ಶ‍್ಲಾಘಿಸಿದರು.

ಪ್ರಾಚೀನ ಭಾರತದ ಮೌಲ್ಯಗಳನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಋಷಿಮುನಿಗಳ ಸಾಧನೆಗೆ ದಾರಿಯಾದ ಯೋಗವನ್ನು ಇಡೀ ಪ್ರಪಂಚಕ್ಕೆ ನರೇಂದ್ರ ಮೋದಿ ಕೊಂಡ್ಡೊಯ್ದ ಕಾರಣ  ಮುಸ್ಲಿಂ ದೇಶಗಳಲ್ಲಿಯೂ ಯೋಗ ದಿನಾಚರಣೆ ನಡೆಯುತ್ತಿರುವುದರ ಬಗ್ಗೆ ಮಾಹಿತಿ ನೀಡಿದರು.

ಯೋಗದಲ್ಲಿ ತೊಡಗಿಸಿಕೊಳ್ಳುವುದರಿಂದ ಯಾವುದೇ ಔಷಧಿಗಳ ಮೊರೆ ಹೋಗದೆ ಆರೋಗ್ಯದಿಂದ ಬಾಳಬಹುದು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಮಾತನಾಡಿ, ಯೋಗ ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ಉಸಿರಾಟದ ಏರಿಳಿತದ ಮೂಲಕ ಮಾನಸಿಕ ಸದೃಢತೆಯನ್ನು ಕಾಪಾಡುವ ಒಂದು ವಿಶಿಷ್ಟ ಕ್ರೀಡೆಯಾಗಿದೆ ಎಂದು ಹೇಳಿದರು.

ವಿಲೇಜ್ ಡಿಸಾಸ್ಟರ್ ರೆಸ್ಕ್ಯೂ ಫೋರ್ಸ್ ರಚನೆಗೆ ಆಗ್ರಹ

ಜಲಯೋಗ ಪರಿಣಿತ ಹರೀಶ್ ಡಿ. ನವಾಥೆ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಹಲವು ಮಂದಿ ಈಜು ಬಾರದೇ ನೀರಿಗಳಿದು ಸಾವನ್ನಪ್ಪುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಅಂತಹವರನ್ನು  ರಕ್ಷಿಸಲು ತರಬೇತಿ ಅಗತ್ಯ. ಎನ್‌ಡಿಆರ್‌ಎಫ್‌ನಂತೆ ವಿಡಿಆರ್‌ಎಫ್ (ವಿಲೇಜ್ ಡಿಸಾಸ್ಟರ್ ರೆಸ್ಕ್ಯೂ ಫೋರ್ಸ್) ರಚನೆ ಮಾಡುವುದರಿಂದ ಹಲವರ ಪ್ರಾಣ ಉಳಿಸಬಹುದು. ಹಾಗಾಗಿ ವಿಡಿಆರ್‍ಎಫ್‍ ರಚನೆಯಾಗಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರದಮಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್ ಸೇರಿದಂತೆ ಮತ್ತಿತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!