ಬರೋಬ್ಬರಿ 11 ಲಕ್ಷ ಜನ ಸೇರಿದ್ದ ಹಾವೇರಿಯಲ್ಲೇ ನಾವು ಸೋತಿದ್ವಿ : ಸಚಿವ ಮಾಧುಸ್ವಾಮಿ
ಸುದ್ದಿ360, ದಾವಣಗೆರೆ ಜು.30: ಉತ್ಸವಗಳಲ್ಲಿ ಜನ ಸೇರಿಸೋದು ಎಲ್ಲಾ ಕಾಮನ್. ರಾಜಕೀಯದಲ್ಲಿ ಎರಡ್ಮೂರು ಲಕ್ಷ ಜನ ಸೇರಿಸಿ ಬಿಟ್ಟರೆ ಏನೋ ಮಹತ್ವದ್ದು ಆಗಿ ಬಿಡುತ್ತದೆ ಅನ್ನೋ ಕಾಲ ಈಗ ಇಲ್ಲ ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರು ಸಿದ್ದರಾಮಯ್ಯ ಅಮೃತ ಮಹೋತ್ಸವ ಕುರಿತು ಪ್ರತಿಕ್ರಿಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಯಡಿಯೂರಪ್ಪನವರ ಜೊತೆ ಕೆಜೆಪಿಗೆ ಹೋದವರು. ಹಾವೇರಿ ಸಮಾವೇಶದಲ್ಲಿ 11 ಲಕ್ಷ ಜನ ಭಾಗಿಯಾಗಿದ್ರು. ಆಗ ಬಂದ ಜನರನ್ನು ನೋಡಿ, ಇನ್ನು ನಮ್ಮ ಎದುರು ಯಾರು ಇಲ್ಲಾ ಅಂತ ಅನ್ಕೊಂಡು ಸಣ್ಣದಾಗಿ ಪಕ್ಷ ಕಟ್ಟೋಕೆ ಹೋದವರು 224 ಕ್ಷೇತ್ರದಲ್ಲಿಯೂ ನಿಲ್ಲೊದಕ್ಕೆ ತಯಾರಾದ್ವಿ. ಆದರೆ ಜನ ಸಮಾವೇಶ ಮಾಡಿದ ಹಾವೇರಿಯಲ್ಲೇ ನಮ್ಮನ್ನ ಸೋಲಿಸಿದ್ರು. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮಾಡೋದ್ರಿಂದ ಗೆಲ್ಲೊಕೆ ಸಾಧ್ಯಾನ ಎಂದು ಪ್ರಶ್ನಿಸಿದರು.
ಜನ ತೀರ್ಮಾನ ಮಾಡ್ತಾರೆ
ಪಾಲಿಟಿಕ್ಸ್ ಒಂದು ರೀತಿ ರನ್ನಿಂಗ್ ರೇಸ್ ಇದ್ದಂತೆ. ಗೆಲ್ತೀವಿ ಅಂತಾನೆ ಎಲ್ಲರೂ ಓಡೋದು. ಓಡಿ ಗುರಿ ಮುಟ್ಟಿದಾಗ ಫಲಿತಾಂಶ ಬರೋದು. ಆದರೆ ಕಾಂಗ್ರೆಸ್‌ನವರು ಈಗ್ಲೇ ಓಡಿ ಫಲಿತಾಂಶ ಪಡೆದವರಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಲೇವಡಿ ಮಾಡಿದರು.
ಬದುಕಿರೋರು ನಾವೆಲ್ಲ ನಾಳೆ ಒಳ್ಳೆ ದಿನ ಬರುತ್ತೆ ಅಂತಾನೇ ಕಾಯ್ತ ಇರ್ತೀವಿ. ಕಾಂಗ್ರೆಸ್‌ನವರು ನಾವು ಅಧಿಕಾರಕ್ಕೆ ಬರ್ತೇವೆ ಅಂತಾ ಅನ್ಕೊಂಡಿದ್ದಾರೆ. ಬಿಜೆಪಿಯವರು ನಾವೂ ಅಧಿಕಾರಕ್ಕೆ ಬರುತ್ತೇವೆ ಅಂದ್ಕೊಂಡಿದೀವಿ. ಏನು ಇಲ್ದೇ ಇರೋರು ನಾವೂ ಅಧಿಕಾರಕ್ಕೆ ಬರುತ್ತೇವೆ ಅಂತಾ ಅಂದ್ಕೊಂಡಿದಾರೆ. ಎಲ್ಲವನ್ನ ಜನ ತೀರ್ಮಾನ ಮಾಡುತ್ತಾರೆ. ನಮ್ಮ ಕೈಯಲ್ಲಿ ಏನು ಇಲ್ಲ. ಇದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಷ್ಟೊಂದು ಕೆಲಸ ಮಾಡಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 30 ಸಾವಿರ ಅಂತರದಿಂದ ಸೋತರು. ನಾವೆಲ್ಲ ಸಾರ್ವಜನಿಕ ವಲಯದಲ್ಲಿ ಇದ್ದೇವೆ. ಸಿನಿಮಾದವರು, ರಾಜಕೀಯದವರನ್ನ ಜನರು ಹೇಗೆ ತಗೋತಾರೆ, ಹಾಗೇ ಹೋಗ್ತೀವಿ ಎಂದರು.