ದಾವಣಗೆರೆ, ಜೂ.13: ನಗರದ ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆಯಲ್ಲಿ ಜೂ.14ರಂದು ಬೆಳಗ್ಗೆ 10 ಗಂಟೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆ ಉಪಾಧ್ಯಕ್ಷೆ ಎಂ.ಎಸ್. ರೂಪಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದಾವಣಗೆರೆ ರಕ್ತ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಜಿಲ್ಲಾಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸುವರು. ಎಸ್ಪಿ ಸಿ.ಬಿ. ರಿಷ್ಯಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮೇಯರ್ ಜಯಮ್ಮ ಗೋಪಿನಾಯ್ಕ್, ಇನ್ಸ್‌ಪೆಕ್ಟರ್ ತ್ಯಾಗರಾಜ್, ಪಾಲಿಕೆ ಸದಸ್ಯರಾದ ವೀರೇಶ್, ಗಣೇಶ್, ಉಮಾ ಪ್ರಕಾಶ್ ಪಾಲ್ಗೊಳ್ಳುವರು ಎಂದರು.
ಇದೇ ವೇಳೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶಾಲೆಯ ಡಿ.ಎಚ್. ಹರ್ಷವರ್ಧನ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 14 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ 25 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ ಆರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಮೊದಲು ಹರ್ಷವರ್ಧನ್ ಅವರಿಗೆ 620 ಅಂಕ ಬಂದಿತ್ತು. ಮರು ಮೌಲ್ಯಮಾಪನಕ್ಕೆ ಹಾಕಲಾಗಿತ್ತು. ಆ ಬಳಿಕ 624 ಅಂಕ ಬಂದಿದ್ದು, ಕನ್ನಡದಲ್ಲಿ ಒಂದು ಅಂಕ ಮಾತ್ರ ಹೋಗಿ 124 ಅಂಕ ಬಂದಿದೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತರುವ ಮೂಲಕ ಶಾಲೆ ಹಾಗೂ ಪೋಷಕರಿಗೆ ಹೆಮ್ಮೆ ತಂದಿದ್ದು, ಇವರಿಗೆ ಶಾಲೆ ಆಡಳಿತ ಮಂಡಳಿ ಅಭಿನಂದಿಸುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷ ನಸ್ರೀನ್ ಖಾನ್, ಶೈಕ್ಷಣಿಕ ನಿರ್ದೇಶಕಿ ಡಾ. ಶ್ರುತಿ ಇನಾಂದಾರ್ ಇದ್ದರು.