ದಾವಣಗೆರೆ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಯುಬಿಡಿಟಿ ಕಾಲೇಜಿನ ಎದುರು ಪ್ರತಿಭಟನೆ

ಸುದ್ದಿ360 ದಾವಣಗೆರೆ, ಸೆ.06: ಕಳೆದ 15 ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ಸರಕಾರದ ಆದೇಶದಂತೆ ಕನಿಷ್ಠ ವೇತನ ಜಾರಿಗೊಳಿಸಿಲ್ಲ. ಹಲವು ವರ್ಷಗಳಿಂದ ಮಾಸಿಕ ವೇತನವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಎಂದು ಆರೋಪಿಸಿ, ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಯುಬಿಡಿಟಿ ಕಾಲೇಜಿನ ಎದುರು ಮಂಗಳವಾರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾಲೇಜಿನ ಸಿ ಮತ್ತು ಡಿ ದರ್ಜೆ ಹೊರಗುತ್ತಿಗೆ ನೌಕರರು ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ ಮತ್ತು ಡಿ ದರ್ಜೆ ನೌಕರರು ಎಲ್ಲ ರೀತಿಯ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕನಿಷ್ಠ ವೇತನ ಸೇರಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಏಜೆನ್ಸಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು.

ತಿಂಗಳ ಕೊನೆಯಲ್ಲಿ ವೇತನ ನೀಡುವ ಏಜೆನ್ಸಿ, ಕೆಲವೊಮ್ಮೆ ಮೇ ತಿಂಗಳ ವೇತನವನ್ನು ಜುಲೈ ತಿಂಗಳಲ್ಲಿ ನೀಡಿದ ನಿದರ್ಶನಗಳೂ ಇವೆ. ಹೀಗಾಗಿ ಕನಿಷ್ಠ ವೇತನ ಜಾರಿಗೊಳಿಸುವ ಜತೆಗೆ ಪ್ರತಿ ತಿಂಗಳ 5ರ ಒಳಗಾಗಿ ವೇತನವನ್ನು ನೌಕರರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳು

  • ರಾಜ್ಯ ಸರಕಾರದ ಆದೇಶದಂತೆ ಎಲ್ಲ ನೌಕರರಿಗೆ ಕನಿಷ್ಠ ವೇತನ ಜಾರಿ
  • ಪ್ರತಿ ತಿಂಗಳು 5ರೊಳಗೆ ವೇತನ ಪಾವತಿ
  • ನೌಕರರು ನಿರ್ವಹಿಸುವ ಹುದ್ದೆಯ ಪದನಾಮ ನಮೂದಿಸುವುದು
  • ಪಿಎಫ್, ಇಎಸ್‌ಐಗೆ ಕಡಿತಗೊಳ್ಳುವ ಹಣದ ಬಗ್ಗೆ ಮಾಹಿತಿ ಇಲ್ಲವಾಗಿದ್ದು, ವೇತನ ಪತ್ರ ನೀಡಬೇಕು.
  • ಬಾಕಿ ಇರುವ ಇಪಿಎಫ್ ಹಣ ಪಾವತಿ
  • ಭದ್ರತಾ ಸಿಬ್ಬಂದಿಗೆ ತಿಂಗಳಲ್ಲಿ ಒಂದು ದಿನ ಸಿಎಲ್ ನೀಡುವುದು

ಈ ಮೊದಲು ಸಮಸ್ಯೆ ಪರಿಹರಿಸುವಂತೆ ಸಂಬಂಧಿಸಿದವರಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಕಾರ್ಮಿಕ ಇಲಾಖೆಗೆ ದೂರು ನೀಡಲಾಗಿದೆ ಆದರೂ ಪ್ರಯೋಜನವಾಗಿಲ್ಲ. ಕಾರಣ, ಪ್ರತಿಭಟನೆ ನಡೆಸುವುದಾಗಿ ಕಳೆದ ತಿಂಗಳೇ ಆಡಳಿತಕ್ಕೆ ಮಾಹಿತಿ ನೀಡಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದೇವೆ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಪ್ರತಿಭಟನಾಕಾರರು ತಿಳಿಸಿದರು.

ಕಾಲೇಜಿನಲ್ಲಿ 96 ನೌಕರನ್ನು ಏಜೆನ್ಸಿ ಮೂಲಕ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಹಾಲಿ ಇರುವ ಏಜೆನ್ಸಿಯವರು ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ. ಪರಿಣಾಮ, ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.  ಇದರಿಂದಾಗಿ ಕುಟುಂಬದ ಖರ್ಚು-ವೆಚ್ಚ ನಿರ್ವಹಣೆ ಕಷ್ಟಕರವಾಗಿದೆ ಎಂದು ಕಾಲೇಜಿನ ಡಿ ದರ್ಜೆ ನೌಕರ ಡಿ. ರವಿಕುಮಾರ್ ನೌಕರರ ಅಳಲನ್ನು ತೋಡಿಕೊಂಡರು.

ಪ್ರತಿಭಟನೆಯಲ್ಲಿ ವಿರೂಪಾಕ್ಷಪ್ಪ ದೊಡ್ಡಮನಿ, ಪರಮೇಶಪ್ಪ, ಮಲ್ಲೇಶ್, ಕರಿಬಸಪ್ಪ, ಕವಿತಾ, ಕೀರ್ತಿ, ಗಂಗಮ್ಮ, ಶಾಯಿನಾ ಬಾನು, ಹೇಮಾವತಿ, ಲಕ್ಷ್ಮೀದೇವಿ, ಸುಜಾತಮ್ಮ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!