ದಾವಣಗೆರೆ ಡಿಆರ್‌ಆರ್ ಕಾಲೇಜು ವಿದ್ಯಾರ್ಥಿಗಳಿಂದ ‘ವಿ ವಾಂಟ್ ಜಸ್ಟೀಸ್’ ಫಲಕ ಹಿಡಿದು ಪ್ರತಿಭಟನೆ

ಸುದ್ದಿ 360 ದಾವಣಗೆರೆ, ಜ.10: ಇಲ್ಲಿನ ಡಿಆರ್ ಆರ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ನಮಗೆ ಅನ್ಯಾಯವಾಗಿದೆ, ನಮಗೆ ನ್ಯಾಯ ಬೇಕು ಎಂಬ ಫಲಕಗಳೊಂದಿಗೆ ಇಂದು ಪ್ರತಿಭಟನೆ ನಡೆಸಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಡಿಆರ್ ಆರ್ ಪಾಲಿಟೆಕ್ನಿಕ್ ಕಾಲೇಜು ಆವರಣಗಳು ಪರಸ್ಪರ ಹೊಂದಿಕೊಂಡಿದ್ದು, ಡಿಆರ್‌ಆರ್ ಪಾಲಿಟೆಕ್ನಿಕ್‌ಗೆ ಸೇರಿದ ಜಾಗದಲ್ಲಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಿಸಲು ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಡಿಆರ್‌ಆರ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟಿಸಿದರು.

ರಾಜ್ಯ ಸರಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಮೂಲಕ ಡಿಆರ್‌ಆರ್ ಪಾಲಿಟೆಕ್ನಿಕ್ ಕಾಲೇಜಿಗೆಂದು 27 ಎಕರೆ ಭೂಮಿಯನ್ನು ದಶಕಗಳ ಹಿಂದೆಯೇ ನೀಡಿದೆ. ಆದರೆ, ಈಗಾಗಲೇ ಇದೇ ಜಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಿಸಲಾಗಿದೆ. ಇದೀಗ ಮತ್ತೊಮ್ಮೆ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಸಲ್ಲಿಸಿದ ಮನವಿಯನ್ನು ಏಕಪಕ್ಷೀಯವಾಗಿ ಪರಿಗಣಿಸಿ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದ 3 ಎಕರೆ ಜಾಗವನ್ನು ನೀಡಲು ನಿರ್ಧರಿಸಲಾಗಿದೆ. ಇದರಿಂದ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕುರುಬರಹಳ್ಳಿ ನಿಂಗರಾಜ್ ಮಾತನಾಡಿ, ಕೇವಲ ಪಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ನೀಡಿದ ಚಕ್ಕುಬಂದಿ ಆಧಾರದ ಮೇಲೆ ಡಿಆರ್‌ಆರ್ ಪಾಲಿಟೆಕ್ನಿಕ್ ಕಾಲೇಜಿನ 3 ಎಕರೆ ಜಾಗವನ್ನು ಸರಕಾರಿ ಕಾಲೇಜಿಗೆ ನೀಡುವ ಕುರಿತು ಸರಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯರ ಗಮನಕ್ಕೂ ತಂದಿಲ್ಲ. ಯಾವುದೇ ಕಾರಣಕ್ಕೂ ಈ ಜಾಗವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಸ್ತಾಂತರ ಮಾಡಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು, ಇಲ್ಲವೇ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಮನವಿ ಆಲಿಸಬೇಕು. ಹಾಲಿ ಗುರುತಿಸಿರುವ ಡಿಆರ್‌ಆರ್ ಜಾಗ ಬಿಟ್ಟು, ಪ್ರಥಮ ದರ್ಜೆ ಕಾಲೇಜಿಗೆ ಬೇರೆಡೆ ಜಾಗ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ವಿ.ಎಂ. ಸಚಿನ್, ಸುಮಂತ್, ಪ್ರಸಾದ್, ಮಹಾಂತೇಶ್, ಗೌರಿ, ದಿವ್ಯಾ, ಸ್ವಪ್ನ, ಚಿನ್ಮಯಿ, ಸನತ್, ವರುಣ್, ದೀಕ್ಷಿತ್, ಡಿಆರ್‌ಆರ್ ಕಾಲೇಜಿನ ಮೆಕ್ಯಾನಿಕಲ್ ಸಿವಿಲ್, ಇಸಿ, ಸಿಎಸ್ ಸಿಪಿಕೆ, ಸಿಪಿಇ, ಇ ಆಂಡ್ ಇ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!