ಸುದ್ದಿ360 ದಾವಣಗೆರೆ, ಆ.19: ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್ ನಲ್ಲಿರುವ ದೈವಜ್ಞ ವಿದ್ಯಾಸಂಸ್ಥೆ, ಪಿಬಿವಿ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ರಾಘವೇಂದ್ರಸ್ವಾಮಿ ಮಠದ ಪ್ರಧಾನ ಅರ್ಚಕರು ಹಾಗೂ ಸಂಸ್ಕೃತ ಉಪನ್ಯಾಸಕರಾದ ಕೃಷ್ಣರಾಜಾ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶ್ರೀ ಕೃಷ್ಣನ ಬಾಲ ಲೀಲೆಗಳು ಮತ್ತು ಕೃಷ್ಣನ ಅವತಾರ ಮತ್ತು ಉಡುಗೆಯ ಮಹತ್ವ ಕುರಿತು ಪ್ರವಚನ ನೀಡಿದರು.
ಶಾಲೆಯ ಮಕ್ಕಳು ಕೃಷ್ಣ-ರಾಧೆಯರ ವೇಷಭೂಷಣದಲ್ಲಿ ಕಂಗೊಳಿಸಿದರು. ಕೃಷ್ಣನ ಲೀಲೆಯನ್ನು ಸಾರುವ ವಿವಿಧ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದರ ಮೂಲಕ ನೋಡುಗರ ಮನಸೂರೆಗೊಂಡರು.
ಹಾಡು ನೃತ್ಯದೊಂದಿಗೆ ಕೃಷ್ಣನ ತುಂಟಾಟವನ್ನು ಸೂಚಿಸುವ ಬೆಣ್ಣೆಯ ಮಡಕೆಯನ್ನು ಒಡೆಯುವ ಸನ್ನಿವೇಶವನ್ನು ಹುಡುಗರ ತಂಡ ಯಶಸ್ವಿಯಾಗಿ ನಿರ್ವಹಿಸಿದ್ದು ನೆರೆದವರಲ್ಲಿ ರೋಮಾಂಚನ ಮೂಡಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಂಕರ ಎನ್ ವಿಠಲ್ಕರ್ ಮಾತನಾಡಿ, ಕೃಷ್ಣ ಬೆಣ್ಣೆಪ್ರಿಯ. ಅಂತೆಯೇ ಮೃದುವಾದ ಸೌಜನ್ಯಯುತವಾದ ಭಾವನೆಯನ್ನು ಹೊಂದಿರುವವರ ಮೇಲೆ ಭಗವಂತನ ಅನುಗ್ರಹ ಸದಾ ಇರುತ್ತದೆ. ಕೃಷ್ಣನ ಅನುಗ್ರಹ ಸದಾ ಎಲ್ಲರ ಮೇಲೆ ಇರುವಂತಾಗಲಿ ಎಂದು ಆಶಿಸಿದರು.
ಮುಖ್ಯಅತಿಥಿಗಳಾದ ಅಜಯ್, ಕಾರ್ಯದರ್ಶಿ ಯೋಗರಾಜ ವರ್ಣೇಕರ್, ನಿರ್ದೇಶಕರಾದ ಸತೀಶ್ ಎನ್. ಮುಖ್ಯೋಪಾಧ್ಯಾಯಿನಿ ಪದ್ಮಾವತಿ, ಶಾಲೆಯ ಬೋಧಕ ಬೋಧಕೇತರ ವರ್ಗ ಹಾಗೂ ಶಾಲೆಯ ಮಕ್ಕಳ ಪೋಷಕವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕೃಷ್ಣಜನ್ಮಾಷ್ಟಮಿಯ ಸಂಭ್ರಮಕ್ಕೆ ಕಾರಣರಾದರು.