ದಾವಣಗೆರೆ ಮಹಾನಗರ ಪಾಲಿಕೆ ಆಡಳಿತ ವೈಫಲ್ಯ – ಪಾಲಿಕೆಗೆ ಬೀಗ ಜಡಿಯಲು ಮುಂದಾದ ಕಾಂಗ್ರೆಸ್

ಸುದ್ದಿ360, ದಾವಣಗೆರೆ, ಜು.08: ಮಹಾನಗರ ಪಾಲಿಕೆ ಆಡಳಿತ ನಡೆಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ, ಬಿಜೆಪಿ ನಗರದ ಕುಂದುಕೊರತೆಗಳನ್ನು ನಿವಾರಿಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ  ಎಂದು ಆರೋಪಿಸಿ  ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಎದುರು ಪ್ರತಿಭಟನೆಗಿಳಿದರು.

ಬಿಜೆಪಿಯ ಆಡಳಿತದಿಂದ ರೋಸಿ ಹೋಗಿದ್ದ ಕಾಗ್ರೆಸ್ ಕಾರ್ಯಕರ್ತರು ಈ ವೇಳೆ ಪಾಲಿಕೆ  ಮುಖ್ಯದ್ವಾರಕ್ಕೆ ಬೀಗ ಜಡಿಯಲು ಮುಂದಾಗಿ, ಪೊಲೀಸರು ಇದನ್ನು ತಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಗಡಿಗುಡಾಳ್ ಮಂಜುನಾಥ್, ನಗರದಾದ್ಯಂತ ಸಮಸ್ಯೆಗಳು ಉಲ್ಬಣಗೊಂಡಿವೆ. 5 ತಿಂಗಳಾದರೂ ಸಾಮಾನ್ಯಸಭೆ ಕರೆದಿಲ್ಲ. ಇಂದು ನಾಳೆ ಎಂದು ಸಬೂಬು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ.

ಇಂದಿನ ಸಭೆ ದಿಢೀರ್ ಮುಂದೂಡಿಕೆ

ಇಂದು ಸಭೆ ನಡೆಸುವುದಾಗಿ ನೆನ್ನೆಯ ದಿನ ನೋಟಿಸ್ ಕಳಿಸಲಾಗಿದೆ. ಆದರೆ ಇಂದು ಸಭೆ ನಡೆದಿಲ್ಲ ಕಾರಣ ಕೇಳಿದರೆ ಅಧ್ಯಕ್ಷರು ದೇವರ ಕಾರ್ಯಕ್ಕೆ ತೆರಳಿದ್ದಾರೆ ಎಂಬ ಉತ್ತರ ನೀಡುತ್ತಾರೆ. ವಾರ್ಡ್ ಗಳ ಯಾವ ಸಮಸ್ಯೆ ಬಗ್ಗೆಧ್ವನಿ ಎತ್ತಿದರೂ ಇಂಥದ್ದೇ ಉಡಾಫೆ ಉತ್ತರ ಬರುತ್ತದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ದೂರವಾಣಿ ಕರೆಯನ್ನು ಸ್ವೀಕರಿಸದ ಮೇಯರ್ ಗೆ ವಿಪಕ್ಷದಿಂದ ಫೋನ್ ಗಿಫ್ಟ್

ನಗರದ ಕುಂದುಕೊರತೆ ಕುರಿತು ಹೇಳಿಕೊಳ್ಳಲು ಮೇಯರ್ ಅವರಿಗೆ ಫೋನಾಯಿಸಿದರೆ ಅವರು ಫೋನ್ ರಿಸೀವ್ ಮಾಡೋದೆ ಇಲ್ಲ ಮಾಡಿದರೂ ಆ ಕಡೆಯಿಂದ ಅವರ ಪತಿ ಮಾತನಾಡಿ, ನಾವು ಹೇಳುವುದನ್ನೇ ಕೇಳಿಸಿಕೊಳ್ಳದೆ ಸಂಪರ್ಕ ಕಟ್ ಮಾಡುತ್ತಾರೆ. ಪಾಲಿಕೆಗೆ ಮೇಯರ್ ಯಾವ ಸಂದರ್ಭದಲ್ಲಿ ಬರುತ್ತಾರೊ ತಿಳಿಯುವುದಿಲ್ಲ, ದೂರವಾಣಿಗೂ ಸಿಗದ ಕಾರಣ ವಿಪಕ್ಷ ಸದಸ್ಯರಿಂದ ಮೇಯರ್ ಗೆ ಫೋನ್ ಕೊಡಲು ತಂದಿದ್ದೇವೆ. ಇನ್ನು ಮುಂದಾದರೂ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ, ಪಾಲಿಕೆಯ ಸದಸ್ಯರ ಸಮಸ್ಯೆಯನ್ನು ಆಲಿಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ವಿಪಕ್ಷ ನಾಯಕರು ತಿಳಿಸಿದರು.

ಏನು ಕೇಳಿದರೂ ಅನುದಾನ ಇಲ್ಲ ಎನ್ನುವ ಇವರು ಬಿಜೆಪಿ ಸದಸ್ಯರ ವಾರ್ಡ್ ಗಳಿಗೆ ಕೋಟಿಗಟ್ಟಲೆ ಅನುದಾನ ಹಾಕಿಕೊಳ್ಳುತ್ತಾರೆ. ಕಾಂಗ್ರೆಸ್ ವಾರ್ಡ್ ಗಳಿಗೆ ಕೇವಲ ಇಪ್ಪತ್ತು ಇಪ್ಪತೈದು ಲಕ್ಷ ನೀಡಿದ್ದಾರೆ ಮತ್ತೆ ಕೆಲವು ವಾರ್ಡ್ ಗಳಿಗೆ ಅನುದಾನವನ್ನೇ ನೀಡಿಲ್ಲ ಎಂದು ದೂರಿದರು.

ಇನ್ನು ಒಂದು ವಾರದಲ್ಲಿ ಸಭೆ ಕರೆದು ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರಾದಿಯಾಗಿ ಬಂದು ಉಗ್ರ ಹೋರಾಟ ಮಾಡುವ ಮೂಲಕ ಪಾಲಿಕೆಗೆ ಬೀಗ ಹಾಕಲಾಗುವುದು ಇಂತಹ ದುರಾಡಳಿತ ನಮಗೆ ಬೇಡ  ಎಂದು ಎ. ನಾಗರಾಜ್ ಎಚ್ಚರಿಸಿದರು.

ಮುಖಂಡ  ಎ. ನಾಗರಾಜ್ ಮಾತನಾಡಿ, ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತ ಸಂಪೂರ್ಣ ದಿವಾಳಿಯಾಗಿದೆ ಸಣ್ಣ ಪುಟ್ಟ ಕಾಮಗಾರಿ, ಕೆಟ್ಟು ನಿಂತಿರುವ ಯಂತ್ರಗಳ ರಿಪೇರಿ ಮಾಡಿಸಲು ಕೂಡ ಹಣವಿಲ್ಲ. ಖಾತೆಯಲ್ಲಿ ಮೈನಸ್ ಬ್ಯಾಲೆನ್ಸ್ ತೋರಿಸುತ್ತಿದ್ದು ಮೈನರ್ ಕೆಲಸಗಳನ್ನು ಸಹ ಮಾಡಿಸಲು ಆಗುತ್ತಿಲ್ಲ. ಪಾಲಿಕೆಯನ್ನು ನಡೆಸುವ ಅನುಭವವೂ ಇಲ್ಲ. ಮೇಯರ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಯಾರೂ ಸಾರ್ವಜನಿಕರ ದೂರವಾಣಿಗೆ ಸಿಗುತ್ತಿಲ್ಲ. ಸಾರ್ವಜನಿಕರು ವಿರೋಧ ಪಕ್ಷದವರಲ್ಲಿ ಬಂದು ತಮ್ಮ ಸಮಸ್ಯೆಗಳನ್ನು ಹೇಳುತ್ತಾರೆ. ಪ್ರತಿ ತಿಂಗಳು ಸಭೆ ಮಾಡುವ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ನೀಗಿಸಬೇಕು ಎಂಬ ಸರ್ಕಾರದ ಆದೇಶಕ್ಕೆ ಇವರಲ್ಲಿ ಮನ್ನಣೆಯೇ ಇಲ್ಲಎಂದು ದೂರಿದರು.

ಇನ್ನು ಕೆಲವೇ ದಿನಗಳಲ್ಲಿ ಅಲ್ಪಸಂಖ್ಯಾತರ ದೊಡ್ಡ ಹಬ್ಬ ಬರಲಿದೆ. ಪೌರ ಕಾರ್ಮಿಕರ ಪ್ರತಿಭಟನೆಯಿಂದ ನಗರದವೆಲ್ಲಾ ಕಸ ತುಂಬಿಕೊಂಡಿದೆ. ಇವುಗಳಿಗೆ ಪಾಲಿಕೆಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಎ. ನಾಗರಾಜ್ ದೂರಿದರು.

ಈ ಸಂದರ್ಭದಲ್ಲಿ ಅಬ್ದುಲ್ ಲತೀಫ್, ಎ.ಬಿ. ರಹೀಂ ಸಾಬ್, ಸಯೀದ್ ಚಾರ್ಲಿ, ಪಾಮೇನಹಳ್ಳಿ ನಾಗರಾಜ್, ಕಲ್ಲಹಳ್ಳಿ ನಾಗರಾಜ್, ಎಸ್. ಮಲ್ಲಿಕಾರ್ಜುನ, ಕೊಟ್ರಬಸಯ್ಯ, ಉಮೇಶ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!