ಕಲಾತಂಡಗಳೊಂದಿಗೆ ‘ಪರಿಸರದಡೆಗೆ ನಮ್ಮ ನಡಿಗೆ’ ಜಾಗೃತಿ ಜಾಥಾ
ಸುದ್ದಿ360 ದಾವಣಗೆರೆ, ಆ.06: ನಗರದಲ್ಲಿ 1946ರಲ್ಲಿ ಆರಂಭವಾದ ಸಂತಪೌಲರ ವಿದ್ಯಾಸಂಸ್ಥೆ ಇದೀಗ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಪರಿಸರದಡೆಗೆ ನಮ್ಮ ನಡಿಗೆ ಹೆಸರಿನಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಯವರು ಪಾರಿವಾಳ ಹಾರಿಬಿಡುವ ಮುಖಾಂತರ ಜಾಥಾವನ್ನು ಉದ್ಘಾಟಿಸಿದರು.
ಹಿರಿಯ ಲೆಕ್ಕಾಧಿಕಾರಿಗಳು ಉದ್ಯಮಿಗಳಾದ ಅಥಣಿ ವೀರಣ್ಣನವರು ಈ ಜಾಗೃತಿ ಜಾಥಾವನ್ನು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ಅಥಣಿ ವೀರಣ್ಣ ನವರ ಮಾತನಾಡಿ ಸಂತಪೌಲರ ವಿದ್ಯಾಸಂಸ್ಥೆ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಒಂದು ವಿದ್ಯಾಸಂಸ್ಥೆಯನ್ನು ಯಾವುದೇ ತೊಂದರೆಗಳಿಲ್ಲದೇ 75 ವರ್ಷ ನಡೆಸುವುದು ಕಷ್ಟ. ಆದರೆ ಸಂತಪೌಲರ ಸಂಸ್ಥೆಯ ಹಿಂದಿನ ಮತ್ತು ಈಗಿನ ಆಡಳಿತ ಮಂಡಳಿಯವರ ಪರಿಶ್ರಮದಿಂದಾಗಿ ಅಮೃತ ಮಹೋತ್ಸವಕ್ಕೆ ಕಾರಣವಾಗಿದ್ದು, ವಿದ್ಯಾಸಂಸ್ಥೆ ಇನ್ನಷ್ಟು ಹೆಸರು ಗಳಿಸಲಿ ಎಂದು ಹಾರೈಸಿದರು.
ಜಾಥಾದ ನೇತೃತ್ವ ವಹಿಸಿದ್ದ ದಿನೇಶ್ ಕೆ.ಶೆಟ್ಟಿ ಅವರು ಮಾತನಾಡಿ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಗಾಗಲೇ ಆರೋಗ್ಯ ಶಿಬಿರ, ಚಿತ್ರಕಲೆ, ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಇಂದಿನ ಈ ಜಾಥಾದ ಮೂಲಕ ಶಾಲಾ ಮಕ್ಕಳು ಸಾರ್ವಜನಿಕರಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವರು ಎಂದರು.
ವಿವಿಧ ಕಲಾತಂಡಗಳೊಂದಿಗೆ ಸುಮಾರು 2 ಸಾವಿರ ಶಾಲಾ ಮಕ್ಕಳು ಭಾಗವಹಿಸಿದ್ದ ಈ ಜಾಗೃತಿ ಜಾಥಾ ಶಾಲಾವರಣದಿಂದ ಪ್ರಾರಂಭವಾಗಿ ಚರ್ಚ್ ರಸ್ತೆಯ ಮುಖಾಂತರ ಡಾ. ಎಂ.ಸಿ.ಮೋದಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪರಿಸರ ಜಾಗೃತಿ ಘೋಷವಾಕ್ಯಗಳನ್ನು ಕೂಗಿ ಸಿ.ಜಿ.ಆಸ್ಪತ್ರೆಯ ರಸ್ತೆ ಮುಖಾಂತರ ರಾಂ ಅಂಡ್ ಕೋ ರಸ್ತೆಯಿಂದ ಶಾಲಾವರಣದಲ್ಲಿ ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಜಯಮ್ಮ,ಮಾಜಿ ವಿರೋಧ ಪಕ್ಷದ ನಾಯಕರಾದ ಎ ನಾಗರಾಜ್ , ರಮೇಶ್, ಸಿಸ್ಟರ್ ಮಾರ್ಜರಿಯಾ, ಸಿಸ್ಟರ್ ಆಲಿಬಿನಾ, ಸಿಸ್ಟರ್ ಸಮಂತಾ, ಸಿಸ್ಟರ್ ವಿಜೇತ, ಸಿಸ್ಟರ್ ಅನಿಷಾ, ರವೀಂದ್ರಸ್ವಾಮಿ, ಕಿರಣ್ ಕುಮಾರ್, ಭಾಗ್ಯನಾಥನ್, ಮಂಜುಳಾ, ರಾಧಾ, ಜೆಸ್ಸಿ, ಅನುರಾಧಾ, ವೈಲೆಟ್, ರಜನಿ, ಪ್ರೇಮ, ಗೋವಿಂದಪ್ಪ, ನೋಮಿತಾ ಚಾವ್ಲಾ, ಹೇಮಲತಾ, ರೇಖಾ, ಸುಮನಾ, ಡಾ. ಲತಾ, ಗಂಗಾಬಿಕಾ, ಡಾ. ಪೂಜಾ ಮತ್ತಿತರರಿದ್ದರು.