ಸುದ್ದಿ360 ದಾವಣಗೆರೆ. ಜೂ.29: ದೇವನಗರಿಯಲ್ಲಿ ಇದೇ ಮೊದಲ ಬಾರಿಗೆ ಜು. 1 ರಂದು ಶ್ರೀ ಜಗನ್ನಾಥ ರಥಯಾತ್ರೆ ಮಹಾ ಮಹೋತ್ಸವ ನಡೆಯಲಿದೆ ಎಂದು ಅಂತರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ಅವಧೂತ ಚಂದ್ರದಾಸ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶುಕ್ರವಾರ ಮಧ್ಯಾಹ್ನ 2ಕ್ಕೆ ದೊಡ್ಡಪೇಟೆಯ ಶ್ರೀ ಗಣೇಶ ದೇವಸ್ಥಾನದಿಂದ ರಥೋತ್ಸವ ಪ್ತಾರಂಭವಾಗಲಿದೆ. ಹಾಸಭಾವಿ ವೃತ್ತ, ಚಾಮರಾಜ ಪೇಟೆ, ಮಂಡಿಪೇಟೆ, ಗಾಂಧಿ ವೃತ್ತ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮೂಲಕ ಕಾರ್ಯಕ್ರಮ ನಡೆಯುವ ಶ್ರೀ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ತಲುಪಲಿದೆ. ರಥೋತ್ಸವ ಸಾಗಿ ಬರುವ ಹತ್ತು ಜಾಗದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪ ದಲ್ಲಿ ಶ್ರೀ ಭಕ್ತಿರಸಾಮೃತ ಸ್ವಾಮೀಜಿ ಆಶೀವರ್ಚನ ನೀಡುವರು. ಜಗನ್ನಾಥ ರಥೋತ್ಸವದ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ತಿಳಿಸುವರು. ಆರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು.
ರಥೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಒಡಿಶಾದ ಪುರಿಯಲ್ಲಿ ಜಗನ್ನಾಥ ರಥೋತ್ಸವದಲ್ಲಿ ಮೂಲ ವಿಗ್ರಹ ಇಡುವುದು ವಿಶೇಷ. ದಾವಣಗೆರೆ ಜನರಿಗೆ ಜಗನ್ನಾಥ ರಥೋತ್ಸವ ನೋಡುವ ಅವಕಾಶ ಒದಗಿಸಲಾಗಿದೆ. ಇನ್ನು ಮುಂದೆಯೂ ದಾವಣಗೆರೆಯಲ್ಲಿ ಜಗನ್ನಾಥ ರಥೋತ್ಸವ ನಡೆಸುವ ಯೋಜನೆ ಇದೆ ಎಂದು ತಿಳಿಸಿದ ಅವರು, ದಾವಣಗೆರೆಯಲ್ಲಿ ಇಸ್ಕಾನ್ ದೇವಸ್ಥಾನ ನಿರ್ಮಾಣಕ್ಕೆ ಸೂಕ್ತ ನಿವೇಶನ ಪರಿಶೀಲನೆ ನಡೆಸಲಾಗುತ್ತಿದೆ. ಜಾಗ ದೊರೆತಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಎಸ್. ಟಿ. ವೀರೇಶ್, ಶ್ರೀನಿವಾಸ್ ದಾಸಕರಿಯಪ್ಪ, ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ವೀರೇಶ್ ಪೈಲ್ವಾನ್, ಸತ್ಯನಾರಾಯಣ, ನಾಗರಾಜರಾವ್ ಶಾನಭೋಗ್, ನರೇಂದ್ರ, ಹಾಲ್ಗುಡಿ ರಾಜು, ಪವನ್ ಇತರರು ಇದ್ದರು.