ದೇಶದಲ್ಲಿ ಹೆಚ್ಚುತ್ತಿರುವ ಜಿಹಾದಿ ಮನಸ್ಥಿತಿ: ಕಾಂಗ್ರೆಸ್ಸಿಗರ ಮೌನವೇಕೆ ?

ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಪ್ರಶ್ನೆ

ಸುದ್ದಿ360 ದಾವಣಗೆರೆ.ಜು.01: ಬಿಜೆಪಿ ಹೆಚ್ಚು ಹೆಚ್ಚು ಜನಪ್ರಿಯತೆ ಗಳಿಸುತ್ತಿರುವುದನ್ನು ಸಹಿಸದ ಕಾಂಗ್ರೆಸ್ ಅಗ್ನಿಪಥ್ ಯೋಜನೆ ವಿರೋಧಿಸಿ ಬೀದಿಗಿಳಿಯುತ್ತದೆ. ಆದರೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿ ಹಾಡ ಹಗಲೇ ಒಬ್ಬ ಸಾಮಾನ್ಯ ವ್ಯಕ್ತಿಯ ಕತ್ತು ಸೀಳಿ ಕೊಲೆ ಮಾಡಿದರೆ ಪ್ರತಿಭಟಿಸುವ ಗೋಜಿಗೆ ಹೋಗುವುದಿಲ್ಲ. ಇದು ಕಾಂಗ್ರೆಸಿಗರ ಅಲ್ಪಸಂಖ್ಯಾತ ತುಷ್ಟೀಕರಣಕ್ಕೆ ಸಾಕ್ಷಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಸ್ಥಾನದ ಉದಯಪುರದಲ್ಲಿ ಜಿಹಾದಿ ಮನಸ್ಥಿತಿಯ ಕೆಲವರು ನಡೆಸಿದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ದೇಶದಾದ್ಯಂಥ ವಿವಿಧ ಸಂಘಟನೆಗಳು ಪ್ರತಿಭಟಿಸುತ್ತಿವೆ. ಆದರೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಹುಲ್ ಗಾಂಧಿಯನ್ನು ವಿಚಾರಣೆ ನಡೆಸಿದರೆ ಪ್ರತಿಭಟಿಸುವ ಕಾಂಗ್ರೆಸ್ಸಿಗರು ಮತ್ತು ಬುದ್ಧಿ ಜೀವಿಗಳು ಕನ್ನಯ್ಯ ಹತ್ಯೆಯ ವಿಷಯದಲ್ಲಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.

ರಾಜಸ್ಥಾನ ಸರ್ಕಾರದ ನಿರ್ಲಕ್ಷವೇ ಕನ್ನಯ್ಯ ಹತ್ಯೆಗೆ ಕಾರಣ

ಕನ್ಹಯ್ಯ ಲಾಲ್ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಬಳಿಕ ಪೊಲೀಸರು ಅವರನ್ನು ಠಾಣೆಗೆ ಕರೆಸಿ ವಿಚಾರಣೇ ನಡೆಸಿದ್ದರು. ಬಳಿಕ ತಮಗೆ ಕೆಲವರಿಂದ  ಜೀವ ಬೆದರಿಕೆ  ಇದೆ. ರಕ್ಷಣೆ ನೀಡಿ ಎಂದು ಕನ್ಹಯ್ಯ ಲಾಲ್ ಪೊಲೀಸರಿಗೆ ಮನವಿ ಮಾಡಿದ್ದರು. ಆದರೂ ಪೊಲೀಸರು ರಕ್ಷಣೆ ನೀಡಿಲ್ಲ. ಪೊಲೀಸರು ಹಾಗೂ ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರದ ನಿರ್ಲಕ್ಷ್ಯವೇ ಕನ್ಹಯ್ಯ ಹತ್ಯೆಗೆ ಕಾರಣ ಎಂದು ವೀರೇಶ್ ಹನಗವಾಡಿ ಆರೋಪಿಸಿದರು.

ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಅಲ್ಲದೆ, ಎಲ್ಲ ರಂಗದಲ್ಲಿಯೂ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಈ ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಜಾತ್ಯಾತೀತತೆ ಸಾಬೀತು ಪಡಿಸಲಿ

ಕಲ್ಲಂಗಡಿ ಮಾರುತ್ತಿದ್ದ ಓರ್ವ ವ್ಯಕ್ತಿಗೆ ತೊಂದರೆಯಾದಾಗ ಬೊಬ್ಬೆಯಿಡುವ ಕಾಂಗ್ರೆಸ್  ಉಗ್ರ ಕೃತ್ಯ ನಡೆದರೂ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಆದರೂ ಸಹ ಹೇಳಿಕೆ ನೀಡದೆ, ಕೇವಲ ಅಲ್ಪ ಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ. ಜಾತ್ಯತೀತ ಸಿದ್ಧಾಂತದ ಮೇಲೆ ಕಾಂಗ್ರೆಸ್ ನವರಿಗೆ ನಂಬಿಕೆ ಇದ್ದದ್ದೇ ಆದರೆ , ತಾವು ನಿಜವಾದ ಜಾತ್ಯತೀತ ವಾದಿಗಳೇ ಆಗಿದ್ದರೆ, ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಿ.

-ವೀರೇಶ್ ಹನಗವಾಡಿ ಬಿಜೆಪಿ ಜಿಲ್ಲಾಧ್ಯಕ್ಷ, ದಾವಣಗೆರೆ

ಹೆಚ್ಚುತ್ತಿರುವ ಜಿಹಾದಿ ಮನಸ್ಥಿತಿ

ಈ ಹಿಂದೆ ಉಗ್ರಗಾಮಿಗಳ ಪ್ರಾಬಲ್ಯ ಇರುವ ಸಿರಿಯಾ ಮತ್ತಿತರ ರಾಷ್ಟ್ರಗಳಲ್ಲಿ ವ್ಯಾಪಕವಾಗಿದ್ದ ಐಸಿಸ್ ಮಾದರಿಯ ನರ ಹತ್ಯೆ ರೀತಿಯ ಅಮಾನುಷ ಕೃತ್ಯಗಳು ಈಗ ಭಾರತದಲ್ಲೂ ನಡೆಯುತ್ತಿವೆ. ಜಿಹಾದಿ ಮನಸ್ಥಿತಿಯವರು ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದ ವೀರೇಶ್, ಕರ್ನಾಟಕದಲ್ಲಿ ಹರ್ಷನನ್ನು ಕೊಂದ ಕತ್ತಿಗಳೇ ಇಂದು ಉದಯಪುರದಲ್ಲಿ ಕನ್ಹಯ್ಯನನ್ನು ಕೊಂದಿವೆ. ಈಗಲಾದರೂ ಕಾಂಗ್ರೆಸಿಗರು ಅಲ್ಪಸಂಖ್ಯಾತರ ಓಲೈಕೆ, ವ್ಯಾಮೋಹ ಬಿಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಡಿ.ಎಸ್. ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಾಧ್ಯಮ ಪ್ರಮುಖ ವಿಶ್ವಾಸ್ , ರಾಕೇಶ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!