ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ರದ್ದು

ಪ್ರವೀಣ್ ಹತ್ಯೆ ಘಟನೆ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನ ಆತ್ಮಸಾಕ್ಷಿಯಾಗಿ ರದ್ದು ಮಾಡಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಜು. 28: ಭಾರತೀಯ ಜನತಾ ಪಕ್ಷದ ಯುವ ಮುಖಂಡ  ಪ್ರವೀಣ್ ಹತ್ಯೆ ಆದ ನಂತರ ಜನ ಹಾಗೂ ಕಾರ್ಯಕರ್ತರು ವ್ಯಕ್ತಪಡಿಸಿರುವ ಆಕ್ರೋಶದ ಹಿನ್ನೆಲೆಯಲ್ಲಿ ಬ್ಯಾಂಕ್ವೆಟ್ ಹಾಲಿನಲ್ಲಿ ಮತ್ತು ಪಕ್ಷದ ವತಿಯಿಂದ  ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮಗಳನ್ನು ಆತ್ಮಸಾಕ್ಷಿಯಾಗಿ ನಿರ್ಣಯ ಕೈಗೊಂಡು ರದ್ದು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ನಿರ್ಣಯದ ಬಗ್ಗೆ ಹಲವಾರು ವ್ಯಾಖ್ಯಾನಗಳು ಆಗಿವೆ. ಆದರೆ. ಮೊನ್ನೆಯ ಘಟನೆಯ ಬಗ್ಗೆ ಯೋಚಿಸಿ  ಈ ತೀರ್ಮಾನಕ್ಕೆ ಬರಲಾಗಿದೆ. ಕಾರ್ಯಕರ್ತರು ಹಾಗೂ ಜಿಲ್ಲಾ ಮಂತ್ರಿಗಳೊಂದಿಗೆ ಚರ್ಚೆ ಮಾಡಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಇಂದಿಗೆ ಬಿಜೆಪಿ ಆಡಳಿತದ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ.  ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎರಡು ವರ್ಷ ಹಾಗೂ ನನ್ನ ನೇತೃತ್ವದ ಸರ್ಕಾರಕ್ಕೆ  ಇದೀಗ ಒಂದು ವರ್ಷ ತುಂಬಿದೆ.  ಜನರಿಗೆ ಒಂದು ವರ್ಷ ಏನು ಮಾಡಿದ್ದೇವೆ ಎಂದು ಹೇಳುವುದು ನಮ್ಮ ಕರ್ತವ್ಯ ಹಾಗೂ ಉತ್ತರದಾಯಿತ್ವ. ಈ ಸಂದರ್ಭದಲ್ಲಿ ಮಾಡಬಹುದಾದ ಇನ್ನಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ತಿಳಿಸುವ ಸಂದರ್ಭವಿದು ಎಂದು ಹೇಳಿದರು.

ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ, ಸದಸ್ಯರಿಗೆ,  ಪದಾಧಿಕಾರಿಗಳಿಗೆ,  ಕಾರ್ಯಕರ್ತರಿಗೆ,  ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ದೇಶವನ್ನು ಸಮರ್ಥವಾಗಿ ನಡೆಸುತ್ತಿರುವ ಪ್ರಧಾನಿ ಮೋದಿಯವರಿಗೆ ಸವಾಲುಗಳ ಮಧ್ಯೆಯೂ ಸಾಧನೆ ಮಾಡಲು  ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಬದ್ಧತೆಯುಳ್ಳ  ಸಚಿವ ಸಂಪುಟ

ನಮ್ಮದು ಒಂದು ತಂಡ. ಸಚಿವ ಸಂಪುಟದಲ್ಲಿ ಅತ್ಯಂತ ದಕ್ಷ ಆಡಳಿತಗಾರರಿದ್ದಾರೆ, ಸೇವಾ ಮನೋಭಾವವಿರುವವರು, ಯುವಕರಿದ್ದಾರೆ. ಒಟ್ಟಾರೆ ಬದ್ಧತೆ ಇರುವ ಸಚಿವ ಸಂಪುಟ ನಮ್ಮದು. ಇವರೆಲ್ಲರ ಪಾಲು ಒಂದು ವರ್ಷದ ಸಾಧನೆಯಲ್ಲಿ ಇದೆ.  ಕೋವಿಡ್ ಸಾಂಕ್ರಾಮಿಕ ಒಂದು ಹಂತಕ್ಕೆ  ಬಂದಂಥ ಸಂದರ್ಭದಲ್ಲಿ  ಅಧಿಕಾರ ವಹಿಸಿಕೊಳ್ಳಲಾಯಿತು. 2 ವರ್ಷ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ನವರು ಅತ್ಯಂತ ಸಮರ್ಥವಾಗಿ, ಸಚಿವ ಸಂಪುಟದ ಸಚಿವರು, ಸಹಕಾರ ನೀಡಿದರು. ವಿಶೇಷವಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದರು.

ಜನರ ಪಾಲ್ಗೊಳ್ಳುವಿಕೆ ಹಾಗೂ ಭಾಗೀಧಾರಿಕೆಯ ಆಡಳಿತ

ಆಡಳಿತ ಯಾರ ಪರವಾಗಿದೆ ಎನ್ನುವುದು ಮುಖ್ಯ. ನಮ್ಮ ನಿರ್ಣಯಗಳ ಮುಖಾಂತರ ಒಟ್ಟಾರೆ  ಜನಪರವಾಗಿರುವ ಆಡಳಿತ ನೀಡುವುದು, ರಾಜ್ಯ ಸಮಗ್ರ ಅಭಿವೃದ್ಧಿ ಹೊಂದಿ ಎಲ್ಲರಿಗೂ ಪಾಲುದಾರಿಕೆ ಮತ್ತು ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವ ಆಡಳಿತವನ್ನು ನೀಡಿದ್ದೇವೆ ಎಂದು ನುಡಿದರು.

admin

admin

Leave a Reply

Your email address will not be published. Required fields are marked *

error: Content is protected !!