ನಕಲಿ ಜಾತಿ ಪ್ರಮಾಣ ಪತ್ರ: ವಿಶೇಷ ನ್ಯಾಯಾಲಯ ರಚನೆಗೆ ಆಗ್ರಹ

ಸುದ್ದಿ360,ದಾವಣಗೆರೆ,ಜು.05: ನಕಲಿ ಜಾತಿ ಪ್ರಮಾಣಪತ್ರ ಸೃಷ್ಟಿಸಿ, ಬೇಡ ಜಂಗಮ ಸೇರಿದಂತೆ ಹಲವು ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಿಗಬೇಕಾದ ಸೌಲತ್ತುಗಳನ್ನು ಕಸಿದುಕೊಳ್ಳುತ್ತಿರುವವ ಸಂಖ್ಯೆ ದಿನೇ ದಿನೇ ಹೆಚ್ಚುತಲಿದ್ದು, ಈ ಕುರಿತ ಸಮಗ್ರ ತನಿಖೆಗೆ ವಿಶೇಷ ನ್ಯಾಯಾಲಯ ರಚಿಸುವಂತೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಡಾ.ಆರ್. ಮೋಹನ್ ರಾಜ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, 1981ರ ಜನಗಣತಿ ಪ್ರಕಾರ ರಾಜ್ಯದಲ್ಲಿ 1553 ಪುರುಷರು ಹಾಗೂ 1482 ಮಹಿಳೆಯರು ಸೇರಿ ಬೇಡ ಜಂಗಮ ಸಮುದಾಯದ ಒಟ್ಟು 3035 ಮಂದಿ ಇದ್ದರು. ಆದರೆ ಪ್ರಸ್ತುತ ಆ ಸಂಖ್ಯೆ ದುಪ್ಪಟ್ಟಾಗಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.

ರಾಜ್ಯದಲ್ಲಿ 2011ರಿಂದ ಈಚೆಗೆ ವೀರಶೈವ ಜಂಗಮ ಸಮುದಾಯಕ್ಕೆ ಸೇರಿದ ಜನರೂ ಸಹ ಬೇಡ ಜಂಗಮರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದರಿಂದ ಅರ್ಹತೆಯುಳ್ಳ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕಿಡಿ ಕಾರಿದರು.

ಮೇಲ್ಜಾತಿಯವರು ಬೇಡ ಜಂಗಮ ಮಾತ್ರವಲ್ಲದೆ ಎಸ್‌ಸಿ, ಎಸ್‌ಟಿಗೆ ಸೇರಿದ ಇತರೆ ಜಾತಿಗಳ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ. ಇಂಥವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಈ ಕುರಿತ ಸಮಗ್ರ ತನಿಖೆಗೆ ಸರಕಾರ ವಿಶೇಷ ನ್ಯಾಯಲಯವೊಂದನ್ನು ಕೂಡಲೇ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ದಸಂಸ ರಾಜ್ಯ ಸಂಚಾಲಕ ಎಚ್. ಮಲ್ಲೇಶ್ ಮಾತನಾಡಿ, ವೀರಶೈವ ಜಂಗಮ ಸಮುದಾಯದವರು ತಮಗೂ ಬೇಡ ಜಂಗಮ ಎಂದು ಅಧಿಕೃತ ಜಾತಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಪ್ರೆತಿಭಟನೆ ನಡೆಸುತ್ತಿದ್ಧಾರೆ. ಸರಕಾರ ಅವರ ಬೇಡಿಕೆಗೆ ಮನ್ನಣೆ ನೀಡಬಾರದು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ರಾಜು ತಳವಾರ್, ಓಬಳೇಶ್, ಚಂದ್ರಪ್ಪ, ವೆಂಕಟೇಶ್ ಬಾಬು ಇತರರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!