ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ
ಸುದ್ದಿ360 ದಾವಣಗೆರೆ ನ.12: ಏಷ್ಯಾದಲ್ಲಿಯೇ ದೊಡ್ಡ ಗಾಜಿನಮನೆ ಎಂಬ ಖ್ಯಾತಿ ಹೊಂದಿರುವ ಬೆಣ್ಣೆನಗರಿಯ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಕರ ಕಣ್ಮನ ಸೆಳೆಯುತ್ತಿದೆ.
ನಗರದ ಹೊರ ವಲಯ ಗಾಜಿನಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆಗೊಂಡಿದ್ದು, ಇದೇ ನವೆಂಬರ್ 10 ರಿಂದ 4 ದಿನಗಳ ಕಾಲ ನಡೆಯುತ್ತಿದೆ.
ವಿಶೇಷವಾಗಿ ಇಲ್ಲಿ ಅಪ್ಪುವಿನ ತೀಮ್ ನೋಡುಗರನ್ನು ಪುನೀತನನ್ನಾಗಿ ಮಾಡಿದೆ. ವಿದ್ಯುತ್ ದೀಪಗಳೊಂದಿಗೆ ಅಲಂಕೃತಗೊಂಡಿರುವ ಗಾಜಿನಮನೆಯಲ್ಲಿ ಫಲಪುಷ್ಪ ಪ್ರದರ್ಶನ ಪ್ರಜ್ವಲಿಸುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಗಾಜಿನ ಮನೆ ಫೋಟೊ ಶೂಟ್ಗೆ ಉತ್ತಮ ಸ್ಥಳ, ಇನ್ನು ವಿದ್ಯುತ್ ದೀಪಗಳ ಅಲಂಕಾರ ಮತ್ತು ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡ ವೈವಿದ್ಯಮಯ ಕಲಾಕೃತಿಗಳು ವೀಕ್ಷಕರನ್ನು ರೋಮಾಂಚನಗೊಳಿಸುವ ಜೊತೆಗೆ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ.
ಜಿಲ್ಲೆಯ ಐತಿಹಾಸಿಕ ಸ್ಥಳಗಳ ಕಲಾಕೃತಿಗಳು ಇಲ್ಲಿ ಹೂವಿನಿಂದ ರೂಪುಗೊಂಡಿದ್ದು, ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಪುಷ್ಕರಣಿ, ವಸಂತ ಮಂಟಪ, ಹರಿಹರದ ಹರಿಹರೇಶ್ವರ ಮೂರ್ತಿ, ಅಲ್ಲದೆ ಸರ್ವಶಿಕ್ಷಣ ಅಭಿಯಾನದ ರಾಯಭಾರಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರ ಥೀಮ್ ನಲ್ಲಿ ಅಲಂಕೃತಗೊಂಡ ಕಲಾಕೃತಿ ನೋಡುಗರ ಕಣ್ಮನ ಸೆಳೆದವು. “ಐ ಲವ್ ನಮ್ಮ ದಾವಣಗೆರೆ” ಹೂವಿನ ಕಲಾಕೃತಿ ಸೆಲ್ಫಿ ಪ್ರಿಯರ ಮನಸೂರೆಗೊಂಡು ಮೊಬೈಲ್ನಲ್ಲಿ ಸೆರೆಗೊಂಡಿತು.
ನವೆಂಬರ್ 10ರಿಂದ 13ರವರೆಗೆ 4 ದಿನಗಳ ಕಾಲ ಪ್ರದರ್ಶನ
ಸಮಯ : ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ
ಪ್ರತಿದಿನ ಸಂಜೆ ಸಂಗೀತ ಕಾರಂಜಿಯ ಎರಡು ಪ್ರದರ್ಶನ
ವರನಟ ಡಾ.ರಾಜ್‌ಕುಮಾರ್ ಅವರ ಯೋಗ ಭಂಗಿ, ಬೇಡರ ಕಣ್ಣಪ್ಪ, ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಬೊಂಬೆ ಹೀಗೆ ವಿವಿಧ ಬಗೆಯ ಕಲಾಕೃತಿಗಳು ನೋಡುಗರ ಮನಸೂರೆಗೊಂಡವು.
ನಗರದ ಖಾಸಗಿ ಅಲಂಕಾರಿಕ ಗಿಡಗಳ ನರ್ಸರಿಗಳು ಕೂಡ ತಮ್ಮಲಿನ ವೈವಿಧ್ಯಮಯ ಅಲಂಕಾರಿಕ ಗಿಡಗಳು ಮತ್ತು ಹೂವಿನ ಗಿಡಗಳನ್ನು ಪ್ರದರ್ಶಿಸಿದ್ದು, ಸಸ್ಯಪ್ರಿಯರು ತಮಗಿಷ್ಟವಾದ ಗಿಡಗಳನ್ನು ಸ್ಥಳದಲ್ಲಿಯೇ ಖರೀದಿಸಬಹುದಾಗಿದೆ. ನಗರದ ಮಹಿಳೆಯರು ಬೆಳೆದ ತಾರಸಿ ತೋಟದ ವಿವಿಧ ಮಾದರಿಗಳು ಸಹ ಪ್ರದರ್ಶನದಲ್ಲಿ ಸ್ಥಳಪಡೆದಿವೆ.
ಕೆಲವು ಸಸ್ಯಗಳನ್ನು ಅವುಗಳ ಹೆಸರಿನ ಲೇಬಲ್ನೊಂದಿಗೆ ಪ್ರದರ್ಶಿಸಿರುವುದು ನೋಡುಗರಿಗೆ ವಿಶೇಷವಾಗಿ ಮಕ್ಕಳಿಗೆ ಸಸ್ಯಪ್ರಪಂಚದ ಕಿರು ಪರಿಚಯ ಮಾಡಿಸಿದೆ.
ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದ ಆಯೋಜಕರು
ಕುಣಿದು ಕುಪ್ಪಳಿಸಿದ ಮಕ್ಕಳು
ಶುಕ್ರವಾರ ಸಂಜೆಯ ಕೊನೆಯ ಸಂಗೀತ ಕಾರಂಜಿ ಪ್ರದರ್ಶನಕ್ಕಾಗಿ ಶಾಲೆಯಿಂದ ಪ್ರವಾಸ ಬಂದ ನೂರಾರು ಮಕ್ಕಳು ಕಾತುರದಿಂದ ಕಾಯುತ್ತಿದ್ದರೆ, ಕಾರಂಜಿಗೆ ನೀರು ಪೂರೈಸುವ ಒಂದು ಪೈಪ್ ಡ್ಯಾಮೇಜ್ ಆಗಿರುವುದರಿಂದ ಪ್ರದರ್ಶನ ನಡೆಯುವುದಿಲ್ಲ ಎಂಬ ಸುದ್ದಿ ಕೇಳಿ ಪೇಚುಮೋರೆಯೊಂದಿಗೆ ಕೂತಿದ್ದರು. ಇಂತಹ ಸಂದರ್ಭದಲ್ಲಿ ಆಯೋಜಕರು ಸಮಯಪ್ರಜ್ಞೆಯಿಂದ ಕಾರಂಜಿ ಚಾಲನೆಗೆ ತೊಡಕಾಗಿದ್ದ ಲೋಪವನ್ನು ಸರಿಪಡಿಸಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದರು.
ಸಂಗೀತ ಕಾರಂಜಿಯ ಕೊನೆಯ ಕ್ಷಣದಲ್ಲಿ ಕನ್ನಡ ಗೀತೆಗಳ ಸಂಗೀತಕ್ಕೆ ಮಾರುಹೋದ ಮಕ್ಕಳು ಎಲ್ಲಾ ಒಟ್ಟಾಗಿ ಪ್ರಾಂಗಣದಲ್ಲಿ ಕುಣಿದು ಕುಪ್ಪಳಿಸಿದರು.
ಜೇಬಿಗೆ ಭಾರ
ಮಕ್ಕಳಿಗೆ ವಿವಿಧ ಆಟಗಳ ಜೊತೆಗೆ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳಿಗೂ ಗಾಜಿನಮನೆ ಆವರಣದಲ್ಲಿ ಅವಕಾಶ ನೀಡಲಾಗಿದ್ದು. ಕೆಲವರು ತಿಂಡಿತಿನಿಸುಗಳನ್ನು ಸವಿದರಾದರೂ ಮತ್ತೆ ಕೆಲವರು ಅಲ್ಲಿನ ತಿನಿಸುಗಳು ಮತ್ತು ಮಕ್ಕಳ ಆಟದ ಟಿಕೆಟ್ ದರ ಕೇಳಿ ದುಬಾರಿಯಾಯಿತೆಂದು ಗೊಣಗುತ್ತಿದ್ದುದು ಕೇಳಿಬಂತು.
ಸಂಗೀತ ಕಾರಂಜಿ
ಕನ್ನಡ ನಾಡು, ನುಡಿ ಮತ್ತು ಇತಿಹಾಸದ ಸಂಕ್ಷಿಪ್ತ ವಿವರವನ್ನು ನೀಡುವ ಧ್ವನಿಸುರುಳಿ ಮತ್ತು ಕಾರಂಜಿಯ ಮೇಲೆ ಮೂಡಿಬಂದ ದೃಶ್ಯಾವಳಿಗಳು ನೋಡುಗರನ್ನು ರೋಮಾಂಚನಗೊಳಿಸಿತು. ನಂತರದ ಸಂಗೀತ ಕಾರಂಜಿಗೆ ಕೆಲವರು ಕುಂತಲ್ಲೇ ನಲಿದಾಡಿದರೆ ಇನ್ನು ಕೆಲವರು ಎದ್ದು ಒಂದೆರಡು ಸ್ಟೆಪ್ ಹಾಕಿ ಮೈಮರೆತದ್ದು ಕಂಡುಬಂತು.