ಸುದ್ದಿ360 ದಾವಣಗೆರೆ ಜ.12: ಕರ್ನಾಟಕ ಸ್ಟೇಟ್ ಡಿಪ್ಲೋಮ ಇನ್ ನರ್ಸಿಂಗ್ ಎಕ್ಸಾಮಿನೇಷನ್ ಬೋರ್ಡ್ ಕಳೆದ ನ.22ರಿಂದ 25ರವರೆಗೆ ನಡೆಸಿದ ಪರೀಕ್ಷೆಗಳ ಮರು ಪರೀಕ್ಷೆ ಮಾಡಲು ಮುಂದಾಗಿರುವುದನ್ನು ಖಂಡಿಸಿ ನಗರದ ನರ್ಸಿಂಗ್ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾವಣೆಗೊಂಡ ನೂರಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಮರು ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ನರ್ಸಿಂಗ್ ವಿದ್ಯಾರ್ಥಿ ಶಿವಕುಮಾರಸ್ವಾಮಿ “ಕಳೆದ ನವೆಂಬರ್ ನಲ್ಲಿ ನಡೆದಿರುವ ಮೊದಲನೇ ಮತ್ತು ಎರಡನೇ ವರ್ಷದ ನರ್ಸಿಂಗ್ ಪರೀಕ್ಷೆಯಲ್ಲಿ ಬೆಂಗಳೂರಿನ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ ನಕಲು ನಡೆದಿದೆ ಎಂಬ ಉದ್ದೇಶದಿಂದ ಬೋರ್ಡ್ ರಾಜ್ಯಾದ್ಯಂತ ಮರುಪರೀಕ್ಷೆ ನಡೆಸಲು ಮುಂದಾಗಿದೆ. ನಕಲು ನಡೆದ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಮರು ಪರೀಕ್ಷೆಯನ್ನು ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಬೋರ್ಡ್ ರಾಜ್ಯಾದ್ಯಂತ ಮರುಪರೀಕ್ಷೆಗೆ ಮುಂದಾಗಿರುವುದನ್ನು ನಾವು ಖಂಡಿಸುತ್ತೇವೆ. ಶ್ರಮವಹಿಸಿ ಓದಿ ಪರೀಕ್ಷೆ ಬರೆದಿರುವ ನಮ್ಮಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತದೆ ಎಂದರು.
ನಂತರ ಜಯದೇವ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ವಿದ್ಯಾರ್ಥಿಗಳು ಮರುಪರೀಕ್ಷೆಯನ್ನು ತಡೆದು ಈ ಹಿಂದೆ ಬರೆದಿರುವ ಪರೀಕ್ಷೆಯ ಮೌಲ್ಯಮಾಪನದಿಂದಲೇ ಫಲಿತಾಂಶ ಪ್ರಕಟಿಸಬೇಕೆಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ನಗರದ ಬಾಪೂಜಿ, ಎಸ್ ಎಸ್. ಮೃತ್ಯುಂಜಯ, ಸಂಜೀವಿನಿ, ಕುಮುದ, ಅಶ್ವಿನಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.