ನವಸಂಕಲ್ಪ ಚಿಂತನಾ ಸಭೆಯಿಂದ ಪಕ್ಷದ ಬಲವರ್ಧನೆ: ಎಂ.ಸಿ.ವೇಣುಗೋಪಾಲ್‍

ಸುದ್ದಿ 360 ದಾವಣಗೆರೆ, ಜೂ.15:

ಕೆಪಿಸಿಸಿಯಿಂದ ಜಿಲ್ಲೆಯ ಪ್ರತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನವಸಂಕಲ್ಪ ಚಿಂತನಾ ಶಿಬಿರವನ್ನು ಜುಲೈ ಮೊದಲ ವಾರದಲ್ಲಿ ನಡೆಸಲಾಗುವುದು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ನಡೆದ ಚಿಂತನಾ ಸಭೆ ಪಕ್ಷದ ಶಾಸಕರು, ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು, ಉಪಾಧ್ಯಕ್ಷರು, ಮುಖಂಡರ ಸಲಹೆ, ಅಭಿಪ್ರಾಯಗಳೊಂದಿಗೆ ಯಶಸ್ವಿಯಾಗಿ ನಡೆಯಿತು.  ಚಿಂತನಾ ಸಭೆಯಲ್ಲಿ ಎಲ್ಲರಿಗೂ ಮುಕ್ತವಾಗಿ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಾಗಿತ್ತು. ಕೆಲವರ ಅಭಿಪ್ರಾಯಕ್ಕೆ ವಿರೋಧ ವ್ಯಕ್ತವಾಯಿತು. ಆ ಸಮಸ್ಯೆಗಳನ್ನು ಕೇಳಿ ಪರಿಹರಿಸಲಾಯಿತು. ಸಭೆಯಲ್ಲಿನ ಅಭಿಪ್ರಾಯಗಳನ್ನು ಕೆಪಿಸಿಸಿ ಗಮನಕ್ಕೆ ತರಲಾಗುವುದು ಎಂದರು.

ಅಲ್ಲದೆ ಜಿಲ್ಲೆಯ ಏಳೂ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುವ ಚಿಂತನಾ ಶಿಬಿರದಲ್ಲಿ ಸ್ವತಃ ತಾವೇ ಭಾಗವಹಿಸಿ ಪಕ್ಷದ ಸಂಘಟನೆ, ಕ್ಷೇತ್ರದಲ್ಲಿನ ಸಮಸ್ಯೆ, ಮುಂದಿನ ಹೋರಾಟ, ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಜನರು ಬಿಜೆಪಿ ಆಡಳಿತದಿಂದ ರೋಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ಗೆ ಅವಕಾಶ ಕೊಡಬೇಕು ಎಂಬ ಮಾತುಗಳನ್ನಾಡುತ್ತಿರುವುದು ಜಿಲ್ಲೆಯಲ್ಲಿನ ಪ್ರವಾಸದಿಂದ ತಿಳಿದುಬಂದಿದೆ. ಮುಂದಿನ  ಚುನಾವಣೆಯಲ್ಲಿ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ವೇಣುಗೋಪಾಲ್‍್ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ದಾವಣಗೆರೆ ಪಿಕ್ನಿಕ್‍ ಸ್ಪಾಟ್‍

ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ದಾವಣಗೆರೆ ಜಿಲ್ಲೆಗೆ ಪಿಕ್ನಿಕ್‍ಗೆ ಬಂದು ಹೋಗುವವರಂತೆ ಬಂದು ಹೋಗುತ್ತಾರೆ. ದಾವಣಗೆರೆ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ ಅವರಿಗೆ ಮಂತ್ರಿಯಾಗಲು ಅರ್ಹತೆ, ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿರುವ ಕಾಮಗಾರಿ ಉದ್ಘಾಟನೆಗೆ ಬರುತ್ತಾರೆ ಹೊರತು ಯಾವುದೇ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಬರುತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಡಿ.ಬಸವರಾಜ್, ನಿಖಿಲ್ ಕೊಂಡಜ್ಜಿ, ಹೊದಿಗೆರೆ ರಮೇಶ್, ಬಿ.ಎಚ್.ವೀರಭದ್ರಪ್ಪ, ಡೋಲಿ ಚಂದ್ರಶೇಖರ್, ಎಸ್.ಮಲ್ಲಿಕಾರ್ಜುನ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!