ಜ.19ಕ್ಕೆ ದಾವಣಗೆರೆಯಲ್ಲಿ ಪ್ರಜಾಧ್ವನಿ ಯಾತ್ರೆ
ಸುದ್ದಿ360 ದಾವಣಗೆರೆ, ಜ.17: ರಾಜ್ಯದಲ್ಲಿ ನಾಳೆಯೇ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಬಿಜೆಪಿ ದುರಾಡಳಿತದಿಂದ ರಾಜ್ಯದಲ್ಲಿ ಜನರು ಬೇಸತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸತೊಡಗಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ಜ.19 ರಂದು ನಡೆಯುವ ಪ್ರಜಾಧ್ವನಿ ಬಸ್ ಯಾತ್ರೆ ಸಮಾರಂಭ ಪೂರ್ವ ಸಿದ್ಧತೆ ಸಭೆ ಬಳಿಕ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಡಳಿತದಲ್ಲಿ ಕಮಿಷನ್ ದಂಧೆ ಜಾಸ್ತಿಯಾಗಿದೆ. ದಿನಕ್ಕೊಂದು ಶಾಸಕರ ಹಗರಣಗಳು ಬಯಲಿಗೆ ಬರುತ್ತಿದ್ದು ಜನರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂದರು.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಭಾಗದಲ್ಲಿ ಕಾಂಗ್ರೆಸ್ಗೆ ರಾಜ್ಯದಲ್ಲಿ ಅತಿ ಹೆಚ್ಚು ದಾಖಲೆಯ ಮತಗಳು ಬರಲಿವೆ. ಅಕಾಂಕ್ಷಿಗಳು ಎಷ್ಟೇ ಬರಲಿ. ಇದಕ್ಕೆ ಪಕ್ಷದ ಕೆಲ ಮಾನದಂಡ ಇವೆ. ಅದರಂತೆ ಪಕ್ಷ ಸರ್ವೇ ಮಾಡಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೇಟ್ ನೀಡಲಿದೆ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ ಎಂದರು.
ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಾತನಾಡಿ, ಪಕ್ಷದ ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಪ್ರಜಾಧ್ವನಿ ಯಾತ್ರೆ ಯಶಸ್ವಿಗೊಳಿಸಬೇಕು.
ಕರ್ನಾಟಕದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜಿವಾಲ ರವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ,, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ದ್ರುವನಾರಾಯಣ, ರಾಮಲಿಂಗಾ ರೆಡ್ಡಿ ಮತ್ತು ಹಿರಿಯ ಮುಖಂಡರು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ರಾಜ್ಯದಲ್ಲಿ ಅಕ್ರಮವಾಗಿ ಬಿಜೆಪಿ ಸರ್ಕಾರ ರಚಿಸಿದೆ. 40% ಬಿಜೆಪಿ ಸರ್ಕಾರದ ಆಡಳಿವನ್ನು ಜನರು ಪ್ರತಿ ದಿನ ನೋಡುತ್ತಿದ್ದಾರೆ. ಸರ್ಕಾರದ ವಿರುದ್ಧ ಆರೋಪ ಮಾಡಿದ ಗುತ್ತಿಗೆದಾರ ಸಂಘದ ಅಧ್ಯಕ್ಷರನ್ನು ಜೈಲಿಗೆ ಹಾಕ್ತಿವೆ ಎಂದು ಎದುರಿಸುತ್ತಿದ್ದಾರೆ. ಕಮೀಷನ್ ಆಮಿಷಕ್ಕೆ ಬಿದ್ದಿರುವ ಬೆಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ. ಬದಲಿಗೆ ಆಸ್ತಿ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ವನ್ಯಜೀವಿಗಳ ಪತ್ತೆ ಪ್ರಕರಣ ಕೋರ್ಟ್ನಲ್ಲಿ ಇರುವ ಕಾರಣ ಈ ಕುರಿತು ಹೆಚ್ಚಿನದೇನನ್ನೂ ಹೇಳಲಾರೆ. ಬಿಜೆಪಿಯವರಿಗೆ ಮೆದುಳಿಲ್ಲ ವಿನಾಕಾರಣ ಆರೋಪ ಮಾಡುತ್ತಾರೆ.
ಎಸ್. ಎಸ್. ಮಲ್ಲಿಕಾರ್ಜುನ್, ಮಾಜಿ ಸಚಿವ.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್. ರಾಮಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ಆಯೂಬ್ ಪೈಲ್ವಾನ್, ಮಾಜಿ ಶಾಸಕರಾದ ಡಿ. ಬಿ. ಶಾಂತನಗೌಡ, ಕೆ. ಜಿ. ಶಿವಕುಮಾರ್, ಶಿವಗಂಗಾ ಬಸವರಾಜ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ನಿಖಿಲ್ ಕೊಂಡಜ್ಜಿ, ಶಾಮನೂರು ಬಸವರಾಜ್, ಕೆ.ಜಿ.ಶಿವಕುಮಾರ್, ಪರಶುರಾಮ್, ಮುದೇಗೌಡ್ರ ಗೀರೀಶ್ ಸೇರಿದಂತೆ ದಾವಣಗೆರೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ 46ಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಜರಿದ್ದರು.