ನುಡಿದಂತೆ ನಡೆದವರು, ನಡೆದಂತೆ ನುಡಿದವರು ಶ್ರೀ ಸಿದ್ದೇಶ್ವರ ಸ್ವಾಮೀಜಿ: ಗಡಿಗುಡಾಳ್ ಮಂಜುನಾಥ್

ದಾವಣಗೆರೆ ಜ.3: ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ನಡೆದಾಡುವ ದೇವರು. ಜೀವನ ಶೈಲಿ, ಉಪನ್ಯಾಸ, ಸ್ಫೂರ್ತಿದಾಯಕ ಮಾತುಗಳಿಂದ ವಿಶ್ವಾದ್ಯಂತ ಕೋಟ್ಯಾಂತರ ಅನುಯಾಯಿಗಳನ್ನು ಹೊಂದಿದ್ದ ಎರಡನೇ ವಿವೇಕಾನಂದ ಅಂತಾನೇ ಪ್ರಸಿದ್ಧಿ ಪಡೆದವರು. ಅವರ ಅಗಲಿಕೆ ಕರುನಾಡಿಗೆ ನೋವು ತಂದಿದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಹೇಳಿದರು.

ನಗರದ ಎಂಸಿಸಿ ಬಿ ಬ್ಲಾಕ್ ನ ಈಜುಕೊಳದ ಬಳಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿ ಭಕ್ತರಿಗೆ ಆದರ್ಶವಾಗಿ ಬದುಕಿದವರು. ಆಡಂಬರ ಜೀವನ ತ್ಯಜಿಸಿ ಸರಳ ಬದುಕು ನಡೆಸುವ ಮೂಲಕ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ ದೇವರು. ಇಂದು ಸೇರಿರುವ ಜನಸ್ತೋಮವೇ ಶ್ರೀಗಳ ಜನಸೇವೆ, ಭಕ್ತಗಣದಲ್ಲಿ ಉಳಿಸಿಕೊಂಡಿದ್ದ ನಂಬಿಕೆ, ಸ್ಫೂರ್ತಿಯುತ ಮಾತುಗಳು, ನುಡಿದಂತೆ ನಡೆದವರು. ನಡೆದಂತೆ ನುಡಿದವರು ಎಂದು ಬಣ್ಣಿಸಿದರು.

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರ ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿ ಎಲ್ಲರಿಗೂ ಅಚ್ಚುಮೆಚ್ಚು. ತತ್ವಜ್ಞಾನಿ, ಆಲೋಚಕ ಸ್ವಾಮೀಜಿ ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನ ನೀಡಿದ್ದಾರೆ. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದವರು. ಆಧ್ಯಾತ್ಮಿಕತೆಗೆ ಬದುಕು ಮೀಸಲಿಟ್ಟ ಭಾರತದ ಸಂತರು.  ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತಾದ ಶ್ರೀ ಸ್ವಾಮಿಜಿಯವರ ಉಪನ್ಯಾಸಗಳು ಅವುಗಳ ಮೂಲತೆ, ಚಿಂತನೆ, ಅಭಿವ್ಯಕ್ತಿ ಮತ್ತು ಚಿಂತನೆಗಾಗಿ ಹೆಸರುವಾಸಿ ಆಗಿದೆ ಎಂದು ತಿಳಿಸಿದರು.

ಎಂಸಿಸಿ ಬಿ ಬ್ಲಾಕ್ ನ ಪರಶುರಾಮ್, ಗುರುಮೂರ್ತಿ ಹಾಗೂ ಯುವ ಮುಖಂಡ ಅಂಜನೂರು ಮುಪ್ಪಣ್ಣ ಮಾತನಾಡಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಸರಳತೆ, ಯೋಗದ ಮನೋಭಾವಗಳು, ಸಹಾನುಭೂತಿ, ಆಧ್ಯಾತ್ಮಿಕ ಸಮಸ್ಯೆಗಳಿಗೆ ಸೃಜನಶೀಲ ವಿಧಾನ ಮತ್ತು ಅವರ ಹೋಲಿಸಲಾಗದ ಶಾಂತ ಮತ್ತು ಸಂಯೋಜನೆ ನಿಜವಾಗಿಯೂ ಅದ್ಭುತ ಎಂದು ಹೇಳಿದರು.

ಶ್ರೀಗಳು ಮಾತು ಆರಂಭಿಸಿದರೆ ಅಲ್ಲಿ ಮೌನ ಆವರಿಸುತಿತ್ತು. ಅವರ ಮಾತುಗಳನ್ನು ತದೇಕಚಿತ್ತದಿಂದ ಭಕ್ತರು, ಜನರು ಆಲಿಸುತ್ತಿದ್ದರು. ಎಂದೂ ಐಷರಾಮಿ ಬದುಕು ಸಾಗಿಸಿದವರಲ್ಲ. ಸರಳತೆ ಪ್ರತಿರೂಪ ಅಂದರೆ ಅವರೇ. ಯಾವುದೇ ಉಪನ್ಯಾಸ ಕಾರ್ಯಕ್ರಮಗಳಿಗೆ ಹೋದರೂ ಒಂದು ರೂಪಾಯಿ ಪಡೆಯದ, ಹಣ ಪಡೆಯುವುದು ಕಂಡು ಬಂದರೆ ಅಂಥ ಸ್ಥಳಕ್ಕೆ ಕಾಲಿಡದಂಥ ಶತಮಾನದ ಸಂತ ಎಂದು ಹೇಳಿದರು.

ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮಿಸಲಾಯಿತು. ಈ ವೇಳೆ ಎಂಸಿಸಿ ಬಿ ಬ್ಲಾಕ್ ನ ಪ್ರಮುಖರಾದ ಆಲೂರು ಜ್ಯೋತಿರ್ಲಿಂಗ, ವಾರ್ಡ್ ಅಧ್ಯಕ್ಷ ಮುರುಗೇಶ್ ಮಂತ್ರಿ, ಭರತ್ ಮೈಲಾರಿ, ಮನು, ನಿತಿನ್, ನೀಲಕಂಠಪ್ಪ,ರಾಜಗೋಪಾಲ್, ಎಂಸಿಸಿ ಬಿ ಬ್ಲಾಕ್ ನ ಹಿರಿಯರು, ಮುಖಂಡರು, ಜನರು ಹಾಜರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!