ಸುದ್ದಿ360 ವಿಜಯನಗರ (ಹೊಸಪೇಟೆ) ಜು.30: ತುಂಗಭದ್ರಾ ನದಿ ಹಿನ್ನೀರು ಪ್ರದೇಶದ ಗುಂಡಾ ಸಸ್ಯೋದ್ಯಾನವನ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಶನಿವಾರ ಕಾದಿತ್ತು ನೋಡಿ ನೂರಾರು ನೀರು ನಾಯಿಗಳ ಚಿನ್ನಾಟದ ದೃಶ್ಯ.
ಸಸ್ಯೋದ್ಯಾನವನದ ಬಳಿಯ ಹಿನ್ನೀರಿನಲ್ಲಿ ಈ ರೀತಿಯಾಗಿ ಕಾಣಿಸಿಕೊಂಡ ನೀರು ನಾಯಿಗಳ ಗುಂಪು ಪ್ರವಾಸಿಗರ ಮನಕೆ ಕಚಗುಳಿ ಕೊಟ್ಟಿದೆ. ಕಳೆದ ಎರಡು ವರ್ಷದಿಂದ ತುಂಗಭದ್ರಾ ಹಿನ್ನೀರು ಪ್ರದೇಶ ನೀರಿನಿಂದ ತುಂಬಿದ್ದ ಕಾರಣ ಗುಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶವು ಹತ್ತಾರು ವಿವಿಧ ಜೀವ ಸಂಕುಲದ ತಾಣವಾಗಿ ಮಾರ್ಪಟ್ಟಿದ್ದು, ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಸಸ್ಯೋದ್ಯಾನ ಪ್ರೇಕ್ಷಣಿಯ ಸ್ಥಳವಾಗಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಸಹ ಹಾದು ಹೋಗುವುದರಿಂದ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮಳೆಗಾಲದಲ್ಲಿ ಸುತ್ತಲಿನ ಗುಡ್ಡಗಾಡು ಪ್ರದೇಶ ಹಚ್ಚ ಹಸಿರಿನಿಂದ ಕಂಗೋಳಿಸುವ ಇಲ್ಲಿನ ರಮಣೀಯ ದೃಶ್ಯ ಮನಮೋಹಕವಾಗಿದೆ.
ಹಿನ್ನೀರು ಪ್ರದೇದಲ್ಲಿ ಮೊಸಳೆ, ದೊಡ್ಡ ಗಾತ್ರದ ಮೀನುಗಳು, ಹೆಬ್ಬಾವು, ಕರಡಿ, ನೀರು ನಾಯಿ, ಚಿರತೆ, ನವಿಲು ಸೇರಿ ಹತ್ತಾರು ಬಗೆಯ ಪ್ರಾಣಿ ಪಕ್ಷಿಗಳು ಇಲ್ಲಿವೆ. ಸದ್ಯ ನೀರು ನಾಯಿಗಳ ಚಿನ್ನಾಟವಾಡಿದ ಮನಮೋಹಕ ದೃಶ್ಯ ಚಿಕ್ಕ ಮಕ್ಕಳಾದಿಯಾಗಿ ಪ್ರವಾಸಿಗರಿಗೆ ಮುದ ನೀಡಿದೆ.