ದಾವಣಗೆರೆ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರು ಪರಿಷ್ಕರಣೆ ಸಮಿತಿಯನ್ನು ಸರ್ಕಾರ ಈ ಕೂಡಲೇ ರದ್ದುಪಡಿಸಿ ಹಿಂದಿನ ವರ್ಷದ ಪಠ್ಯವನ್ನು ಮಕ್ಕಳಿಗೆ ವಿತರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ಮಹಾನಗರ ಪಾಲಿಕೆ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಉಪ ವಿಭಾಗಾಧಿಕಾರಿ ಕಚೇರಿ ತಲುಪಿ ಎಸಿ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರವು ಈ ಹಿಂದೆ ಪೆÇ್ರ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಸಿದ್ಧಪಡಿಸಿದ ಶಾಲಾ ಪಠ್ಯ ಪುಸ್ತಕಗಳನ್ನು ಮರು ಪರಿಷ್ಕರಿಸಲು ತರಾತುರಿಯಲ್ಲಿ ರೋಹಿತ್ ಚಕ್ರತೀರ್ಥ ಎಂಬವರನ್ನು ನೇಮಿಸಿದೆ. ಆದರೆ ರೋಹಿತ್ ನೇತೃತ್ವದ ಸಮಿತಿಯು ಅತ್ಯಂತ ಬೇಜವಾಬ್ದಾರಿತನದಿಂದ ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುವ ಪಠ್ಯವನ್ನು ಹಾಕಿದ್ದಲ್ಲದೆ ಕೆಲವು ಉತ್ತಮ ಪಠ್ಯವನ್ನು ತೆಗೆದು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಸಂಸ್ಕೃತಿ ಪರಂಪರೆಗೆ ತಕ್ಕಂತಹ ಹಲವಾರು ಪಾಠಗಳನ್ನು ಯಾವುದೇ ಕಾರಣ ನೀಡದೆ ತೆಗೆದು ಹಾಕಲಾಗಿದೆ. ಇವುಗಳ ಬದಲಿಗೆ ಸಂಘ ಪರಿವಾರದ ಸಿದ್ಧಾಂತದ ಪರವಾದ ಪಠ್ಯವನ್ನು ತುರುಕಲಾಗಿದೆ. ಅಲ್ಲದೆ ಕುವೆಂಪು ಅವರ ನಾಡಗೀತೆಯನ್ನು ಸಹ ತಿರುಚಿ ಬರೆಯಲಾಗಿದೆ. ಸಂವಿಧಾನ ಬದ್ಧವಾದ ಯಾವುದೇ ರೀತಿ ನೀತಿ ಅನುಸರಿಸದೆ ರಚನೆಯಾದ ಈ ಸಮಿತಿ ನೀಡಿರುವ ಎಲ್ಲ ಪಠ್ಯ ಶಿಫಾರಸುಗಳನ್ನು ಅಸಿಂಧುಗೊಳಿಸಿ, ಈ ಹಿಂದೆ ಬರಗೂರು ನೇತೃತ್ವದಲ್ಲಿ ಇದ್ದ ಸಮಿತಿಯ ಪಠ್ಯ ಪುಸ್ತಕಗಳನ್ನೇ ಮಕ್ಕಳಿಗೆ ಹಂಚಬೇಕು ಎಂದು ಮನವಿ ಮಾಡಿದರು.
ಸರ್ಕಾರ ಯಾರದ್ದೂ ಸಿದ್ಧಾಂತ, ಸಂಘಟನೆ, ಸ್ವಾರ್ಥಕ್ಕೆ ಕನ್ನಡಿಗರ ಭಾವನೆಗಳ ಜೊತೆ ಆಟ ಆಡುವುದನ್ನು ತಕ್ಷಣ ನಿಲ್ಲಿಸಬೇಕು. ಅಲ್ಲದೆ ಸರ್ಕಾರ ತನ್ನ ಮೊಂಡುತನಕ್ಕೆ ಬಿದ್ದರೆ ರಕ್ಷಣ ವೇದಿಕೆ ಹಾಗೂ ಕನ್ನಡಿಗರು ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಜಬೀವುಲ್ಲಾ, ಅಯೂಬ್, ತಿಪ್ಪೇಶ್, ಬಾಲಸುಬ್ರಹ್ಮಣ್ಯಂ, ಬಸಮ್ಮ, ಶಾಂತಮ್ಮ, ಶಶಿಕಲಾ, ಶೋಭಾ, ಅಬ್ದುಲ್ ಗಫಾರ್, ಮಹಬೂಬ್ ಸಾಬ್, ಗಜೇಂದ್ರ, ಸಂತೋಷ್ ಸೇರಿದಂತೆ ಇತರರು ಇದ್ದರು.