ಪೆನ್ಷನ್ ಬದಲಿಗೆ ಸರ್ಕಾರಕೆ ತೆರಿಗೆ ಕಟ್ಟುವಂತೆ ಬೆಳೆಯಿರಿ

ವಿಕಲಚೇತನರ ಉದ್ಯೋಗಮೇಳದಲ್ಲಿ ಡಾ. ಮಹಾಂತೇಶ ಜಿ. ಕಿವಡಸಣ್ಣವರ ಆಶಯ

ದಾವಣಗೆರೆ, ಮೇ ೨೦: ಎಲ್ಲಾ ಇದ್ದು ಏನೂ ಮಾಡಲಾಗದ ಸನ್ನಿವೇಶದಲ್ಲಿ ಇಲ್ಲ ಎನ್ನುವುದರ ಮದ್ಯೆ ಎಲ್ಲವನ್ನೂ ಹುಡುಕಿಕೊಳ್ಳಲು ಹೊರಟಿರುವ ವಿಕಲಚೇತನರ ಉದ್ಯೋಗಮೇಳ ನಮಗೆ ಸ್ಪೂರ್ಥಿದಾಯಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ. ಚನ್ನಪ್ಪ ಅಭಿಪ್ರಾಯಪಟ್ಟರು.

ಸಮರ್ಥನಂ ಅಂಗವಿಕಲ ಸಂಸ್ಥೆ ವತಿಯಿಂದ ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಅಂಧಮಕ್ಕಳ ಸರ್ಕಾರಿ ಪಾಠ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಯುವ ವಿಕಲಚೇತನರ ಉದ್ಯೋಗ ಮೇಳವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಬಹಳಷ್ಟು ಜನ ನಿರುದ್ಯೋಗ ಎಂದು ಹೇಳುತ್ತಾ ಅಲೆಯುತ್ತಿರುತ್ತಾರೆ. ಉದ್ಯೋಗ ಹುಡುಕಿಕೊಂಡು ಹೋದರೂ ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಅಂತಹದ್ದರಲ್ಲಿ ವಿಶೇಷ ಚೇತನರಿಗೆ ತಾವು ಇದ್ದಲ್ಲೇ ಅವಕಾಶಗಳನ್ನು ತಂದು ನೀಡುತ್ತಿರುವ ಸಮರ್ಥನಂ ಸಂಸ್ಥೆಗೆ ಧನ್ಯವಾದಗಳನ್ನು ಸಲ್ಲಿಸಿದರು. ವಿಕಲ ಚೇತನರಿಗೆ ಸ್ಪೂರ್ಥಿಯ ಸೆಲೆಯಂತೆ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದ ಅವರು, ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆಯುವಲ್ಲಿ ಅಥವಾ ಲೋಪಗಳಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು.

ಸಮರ್ಥನಂ ಸಂಸ್ಥೆಯ ಸಂಸ್ಥಾಪಕರೂ ಹಾಗೂ ವ್ಯವಸ್ಥಾಪಕ ಟ್ರಸ್ಟಿಗಳಾದ ಡಾ. ಮಹಾಂತೇಶ ಜಿ. ಕಿವಡಸಣ್ಣವರ ಮಾತನಾಡಿ, ಡಿಸೇಬಲಿಟಿಯಲ್ಲಿ ಮೊದಲ ಮೂರು ಅಕ್ಷರಗಳನ್ನು ತೆಗೆದು ಬಿಸಾಕಿ ನಿಮಗೆ ಎಬಿಲಿಟಿ ಸಿಗುತ್ತೆ. ಆ ಮೂಲಕ ಎಲ್ಲರೂ ಸರ್ಕಾರದಿಂದ ಪೆನ್ಷನ್ ಕೇಳದೇ ಸರ್ಕಾರಕ್ಕೆ ತೆರಿಗೆ ಕಟ್ಟುವಂತೆ ಬೆಳೆಯಿರಿ ಎಂದು ಹಾರೈಸಿದ ಅವರು, ಸುರಿಯುತ್ತಿರುವ ಮಳೆಯಲ್ಲಿಯೂ ಎದೆಗುಂದದೆ ಕೆಲಸ ಮಾಡ್ತೇವೆ ಎಂದು ಬಂದಿರುವ ಅಭ್ಯರ್ಥಿಗಳನ್ನು ಕುರಿತು ಶ್ಲಾಘಿಸಿದರು.

ಸಮರ್ಥನಂ ಸಂಸ್ಥೆ ೪೮ ಉದ್ಯೋಗ ಮೇಳದೊಂದಿಗೆ ಸಮಾರು ೩೦ ಸಾವಿರ ಜನರಿಗೆ ಅಪ್ರೋಚ್ ಮಾಡುವ ಹಾಗೂ ಕನಿಷ್ಠ ಎಂಟು ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಬೇಕು ಎಂಬ ಟಾರ್ಗೆಟ್ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದು ಈಗಾಗಲೇ ಶೇ.೬೦ರಷ್ಟನ್ನು ಸಾಧಿಸಿದ್ದೇವೆ ಇನ್ನೆರಡು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಲಿದ್ದೇವೆ ಎಂದು ಸಮರ್ಥನಂ ಸಂಸ್ಥೆಯ ಸತೀಶ್ ಕೆ ತಿಳಿಸಿದರು.

ಉದ್ಯೋಗಮೇಳದಲ್ಲಿ ಸುಮಾರು ೩೫೦ರಿಂದ ೪೦೦ ಜನ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಸುಮರು ೧೪ ಕಂಪನಿಗಳು ಭಾಗವಹಿಸಿದ್ದವು.

ಸಂಜ್ಞಾ ಭಾಷೆ ತಜ್ಞ ಜೆ. ದುರ್ಗೇಶ್ ಕಾರ್ಯಕ್ರಮದ ಸಂಪೂರ್ಣ ವಿವರವನ್ನು ಭಾಷಾಂತರಿಸುವ ಮೂಲಕ ಅಭ್ಯರ್ಥಿಗಳಿಗೆ ನೆರವಾದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಡಾ.ಕೆ.ಕೆ. ಪ್ರಕಾಶ್, ಸಿಆರ್‌ಸಿ ಸೆಂಟರ್‌ನ ನಿರ್ದೇಶಕರಾದ ಉಮಾಶಂಕರ್ ಮೊಹಂತಿ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಕ್ಯಾತ್ಯಾಯಿನಿ, ದೇವರಾಜ್, ಚಂದ್ರಶೇಖರ್, ಸೈಯದ್, ವಿಕಲ ಚೇತನ ಅಧಿಕಾರಿಗಳು, ಸಮರ್ಥನಂ ಸಂಸ್ಥೆಯ ಯುನೈಟೆಡ್ ಕಿಂಗ್ಡಮ್ ಶಾಖೆಯ ಹೇಮಂತ್ ಗಣೇಶ್ ಗುಡಿ, ಮಲ್ಲಿಕಾರ್ಜುನ ಗೌಡ, ಸತೀಶ್ ಕೆ, ಚಂದ್ರಶೇಖರ್, ಶಿವರಾಜು ಮತ್ತಿತರರು ಇದ್ದರು.

ಯುಡಿಐಡಿ ಕಾರ್ಡ್ ತಪ್ಪದೆ ಮಾಡಿಸಿ

ವಿಕಲ ಚೇತನರು ಯುಡಿಐಡಿ ಕಾರ್ಡ್‌ನ್ನು ತಪ್ಪದೇ ಮಾಡಿಸಿಕೊಳ್ಳುವ ಮೂಲಕ ಅಗತ್ಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಯುಡಿಐಡಿ ಕಾರ್ಡ್‌ನ್ನು ಆನ್‌ಲೈನ್ ಮೂಲಕ ಮಾಡಬಹುದಾಗಿದ್ದು, ಅತ್ಯಂತ ಸುಲಭವಾಗಿದೆ. ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಮತ್ತು ಗ್ರಾಮ ಒನ್ ಗಳಲ್ಲೂ ಸಹ ಮಾಡಲಾಗುತ್ತದೆ ಎಂದು ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿ, ಡಾ. ಕೆ.ಕೆ. ಪ್ರಕಾಶ್ ಮನವಿ ಮಾಡಿದರು.

admin

admin

Leave a Reply

Your email address will not be published. Required fields are marked *

error: Content is protected !!