ಪರಿಷ್ಕೃತ ಪಠ್ಯ ಪುಸ್ತಕ ಹಿಂಪಡೆಯುವುದಿಲ್ಲ: ರಾಜ್ಯಸರ್ಕಾರದ ಸ್ಪಷ್ಟ ನಿಲುವು

ಸಾಂದರ್ಭಿಕ ಚಿತ್ರ

ತಜ್ಞರು ತಿಳಿಸಿರುವ ಕೆಲವು ದೋಷಗಳನ್ನು ಸರಿಪಡಿಸಿ ಶಾಲೆಗಳಿಗೆ ಪುಸ್ತಕ ವಿತರಿಸಲು ಸರ್ಕಾರದ ನಿರ್ಧಾರ

ಸುದ್ದಿ 360 ಬೆಂಗಳೂರು, ಜೂ.24: ಇತ್ತೀಚೆಗೆ ಅತ್ಯಂತ ವಿವಾದಕ್ಕೆ ಗುರಿಯಾಗಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರೂಪಿಸಿರುವ ಪಠ್ಯವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಪಠ್ಯದಲ್ಲಿ ಕೆಲವು ಲೋಪದೋಷಗಳನ್ನು ತಜ್ಞರು ಗುರುತಿಸಿ ಅವುಗಳನ್ನು ಸರಿಪಡಿಸಿ ಮುಂದಿನ ಹತ್ತು ದಿನಗಳ ಒಳಗಾಗಿ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.

ವಿಧಾನಸೌಧದ ಸಭಾಂಗಣದಲ್ಲಿ ಗುರುವಾರ ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಸಚಿವರಾದ ಸಿ.ಸಿ. ಪಾಟೀಲ್, ಬೈರತಿ ಬಸವರಾಜ ಮತ್ತು ಶಿವರಾಮ ಹೆಬ್ಬಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ಸಮರ್ಥಿಸಿಕೊಂಡರು.

150 ಲೋಪಗಳು ಕಂಡಿರಲಿಲ್ಲವೆ?

“ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರಚಿಸಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಿತ್ತು. ಆಗ ಅವರು ಪರಿಷ್ಕರಿಸಿದ ಪಠ್ಯದಲ್ಲಿ ಬರೋಬ್ಬರಿ 150 ಲೋಪದೋಷಗಳು ಇದ್ದವು. ಇಷ್ಟೊಂದು ತಪ್ಪುಗಳಿದ್ದರೂ ಸಹ ಸಿದ್ದರಾಮಯ್ಯ ಸರಕಾರ ಪಠ್ಯಪುಸ್ತಕಗಳ ಮರುಮುದ್ರಣ ಮಾಡಲಿಲ್ಲ. ಆದರೂ ಯಾವ ಸಾಹಿತಿಗಳು ಧ್ವನಿಯೆತ್ತಲಿಲ್ಲ. ಆದರೆ ಈಗ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಅಪಸ್ವರ ತೆಗೆಯುತ್ತಿರುವುದು ಏಕೆ? ” ಎಂದು ಸಚಿವರು ಸಾಹಿತಿಗಳಿಗೆ ಪ್ರಶ್ನೆ ಹಾಕಿದರು.

ಇದೆ ವೇಳೆ ಈ ಹಿಂದೆ ಶಾಲಾ ಪಠ್ಯವನ್ನು ಪರಿಷ್ಕರಿಸಿದ ಪ್ರೊ. ಜಿ.ಎಸ್. ಮುಡಂಬಡಿತ್ತಾಯ ಸಮಿತಿ, ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ ಹಾಗೂ ರೋಹಿತ್ ಚಕ್ರತೀರ್ಥ ಸಮಿತಿಗಳು ಯಾವ ರೀತಿ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ಪಠ್ಯಗಳನ್ನು ಪರಿಷ್ಕರಣೆ ಮಾಡಿದೆ ಎಲ್ಲಾ ಪಠ್ಯ ಸಮಿತಿಗಳ ನಡುವಿನ ಹೋಲಿಕೆ ಹಾಗೂ ವ್ಯತ್ಯಾಸಗಳ ವಿವರವನ್ನು ಒಳಗೊಂಡ 200ಕ್ಕೂ ಹೆಚ್ಚು ಪುಟಗಳ ಕೈಪಿಡಿಯೊಂದನ್ನು ಸಚಿವರು ಬಿಡುಗಡೆಗೊಳಿಸಿದರು ಈ ಮೂಲಕ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪಠ್ಯ ಪುಸ್ತಕದಲ್ಲಿ ಅವಾಂತರಗಳ ಬಗ್ಗೆ ಬೆಳಕು ಚೆಲ್ಲಿದರು.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಓಲೈಕೆ ಉದ್ದೇಶದಿಂದ ಪಠ್ಯದಲ್ಲಿ ಮೈಸೂರು ಅರಸರಿಗೆ ಸಂಬಂಧಪಟ್ಟ ವಿಚಾರಗಳನ್ನು ಕಡೆಗಣಿಸಿ ಟಿಪ್ಪುವಿನ ವೈಭವೀಕರಣ ಮಾಡಲಾಗಿತ್ತು. ಬರಗೂರು ರಾಮಚಂದ್ರಪ್ಪ ಸಮಿತಿ ಮೂಲಕ ಪಠ್ಯ ಪರಿಷ್ಕರಣೆ ಮಾಡಿಸಿ ಕಮ್ಯುನಿಸ್ಟ್ ಸಿದ್ಧಾಂತ ವನ್ನು ಮಕ್ಕಳ ಮೇಲೆ ಹೇರಲಾಗಿತ್ತು. ಜೊತೆಗೆ, ಭಾರತೀಯ ಸಂಸ್ಕೃತಿ, ರಾಜರ ಆಳ್ವಿಕೆ, ಶೌರ್ಯ, ಪರಾಕ್ರಮಗಳನ್ನು ಮರೆ ಮಾಚಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಅಷ್ಟಕ್ಕೇ ನಿಲ್ಲದೆ “ಹಿಂದೂ ಧರ್ಮ, ಹಿಂದೂ ಎಂಬ ಪದ, ರಾಮಾಯಣ- ಮಹಾಭಾರತದ ಅಂಶಗಳು, ಶಿವ, ರಾಮ, ಕೃಷ್ಣರ ಕುರಿತಾದ ಅಂಶಗಳನ್ನು ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯಪುಸ್ತಕದಿಂದ ತೆಗೆದದು ಹಾಕಿತ್ತು” ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!