ಪಶ್ಚಿಮ ಶಿಕ್ಷಕರ ಕ್ಷೇತ್ರ: ಬಿಜೆಪಿಯ ಬಸವರಾಜ ಹೊರಟ್ಟಿ ದಾಖಲೆ ಜಯ

ಸುದ್ದಿ360 ಬೆಳಗಾವಿ
ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲವು ಸಾಧಿಸಿದ್ದಾರೆ. ಈ ಮೂಲಕ ಸತತ 8 ನೇ ಬಾರಿ ಹೊರಟ್ಟಿ ಇದೇ ಕ್ಷೇತ್ರದಲ್ಲಿ ತಮ್ಮ ಗೆಲುವಿನ ಓಟ ಮುಂದುವರಿಸಿದ್ದಾರೆ.

ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ £ಬುಧವಾರ ಬೆಳಗ್ಗೆ 8 ಗಂಟೆಗೆ ಮತಗಳ ಎಣಿಕೆ ಆರಂಭವಾಗಿ, ಮೊದಲು ಅನರ್ಹ ಮತಗಳನ್ನು ಬೇರ್ಪಡಿಸಲಾಯಿತು. ಒಟ್ಟು 9,266 ಮತಗಳನ್ನು ಪಡೆದ ಹೊರಟ್ಟಿ, ಕಾಂಗ್ರೆಸ್ ಬಸವರಾಜ ಗುರಿಕಾರ ವಿರುದ್ಧ 4669 ದಾಖಲೆ ಮತಗಳ ಅಂತರದಲ್ಲಿ ವಿಜಯ ಸಾಧಿಸಿದರು. ಬಸವರಾಜ ಗುರಿಕಾರ 4597 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ಗಡದಿನ್ನಿ 273 ಮತ ಪಡೆಯಲಷ್ಟೇ ಶಕ್ತರಾದರು. ಉಳಿದ ಐವರು ಅಭ್ಯರ್ಥಿಗಳ ಮತ ಗಳಿಕೆ ನೂರರ ಗಡಿ ದಾಟಲಿಲ್ಲ. ಹೀಗಾಗಿ ಬಸವರಾಜ ಹೊರಟ್ಟಿ ಏಕಪಕ್ಷೀಯ ಗೆಲುವು ದಾಖಲಿಸಿದಂತಾಗಿದೆ.
ಕುಲಗೆಟ್ಟ ಮತಗಳೇ ಹೆಚ್ಚು
ಈ ಕ್ಷೇತ್ರದ ಫಲಿತಾಂಶದ ಮತ್ತೊಂದು ವಿಶೇಷ ಏನೆಂದರೆ, ಕುಲಗೆಟ್ಟ ಅಥವಾ ಅನರ್ಹ ಮತಗಳು ಮೂರನೇ ಸ್ಥಾನದಲ್ಲಿರುವುದು. ಚುನಾವಣೆಯಲ್ಲಿ ಒಟ್ಟು 1,223 ಕುಲಗೆಟ್ಟ ಮತಗಳು ಚಲಾವಣೆಯಾಗಿವೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಭ್ಯರ್ಥಿಗಳು, ಪಾಠ ಹೇಳುವ ಶಿಕ್ಷಕರಿಗೇ ಮತ ಚಲಾವಣೆ ಹೇಗೆ ಮಾಡುವುದು ಎಂಬ ಅರಿವಿಲ್ಲದಿದ್ದರೆ ಹೇಗೆ? ಎಂದು ಪರಶ್ನಿಸಿದರು.
ಬಹಳಷ್ಟು ಶಿಕ್ಷಕರು ಮತಪತ್ರದಲ್ಲಿ ತಮ್ಮ ಅಭ್ಯರ್ಥಿಯ ಹೆಸರು, ಚಿಹ್ನೆ ಮುಂದೆ ‘1’ ಎಂದು ಬರೆಯುವ ಬದಲು ‘ರೈಟ್’ ಮಾರ್ಕ್ ಹಾಕಿದ್ದರು. ಹೀಗಾಗಿ ಈ ಎಲ್ಲಾ ಮತಗಳನ್ನು ಮತ ಎಣಿಕೆ ಮಾಡುವ ಅಧಿಕಾರಿಗಳು ತಿರಸ್ಕರಿಸಿದರು. ಮೊದಲ ಸುತ್ತಿನಲ್ಲೇ ಬಹಳಷ್ಟು ಮತಗಳು ತಿರಸ್ಕಾರಗೊಂಡಿದ್ದು, ಅಭ್ಯರ್ಥಿಗಳ ತಲೆ ನೋವು ಹೆಚ್ಚಿಸಿದ್ದು ಸುಳ್ಳಲ್ಲ.
ಜೂನ್ 13ರಂದು ಸೋಮವಾರ ನಡೆದ ಚುನಾವಣೆಯಲ್ಲಿ 9856 ಪುರುಷರು, 5721 ಮಹಿಳೆಯರು ಸೇರಿ ಒಟ್ಟು 15577 ಮತದಾರರು ಹಕ್ಕು ಚಲಾವಣೆ ಮಾಡಿದ್ದು, ಶೇ.86.67 ಮತದಾನವಾಗಿತ್ತು.
ಶಿಕ್ಷಕರ ಋಣ ತೀರಿಸುತ್ತೇನೆ
ಗೆಲುವಿನ ನಂತರ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿದಿಗಳ ಜತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ, 8ನೇ ಗೆಲುವು ತಂದುಕೊಟ್ಟ ಶಿಕ್ಷಕರಿಗೆ ಧನ್ಯವಾದಗಳು. ಈ ಹಇಂದೆ ಕೂಡ ಕ್ಷೇತ್ರ ಹಾಗೂ ಶಿಕ್ಷಕ ಸಮುದಾಯಕ್ಕೆ ಸೇವೆ ಸಲ್ಲಿಸಿದ್ದೇನೆ. ಮುಂದೆ ಕೂಡ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
ಸಚಿವ ಸ್ಥಾನ ಪಕ್ಷಕ್ಕೆ ಬಿಟ್ಟಿದ್ದು
ಇದುವರೆಗೆ ಸಭಾಪತಿ ಸ್ಥಾನದಲ್ಲಿ ಇದ್ದ ಕಾರಣ ಶಿಕ್ಷಕರ ಸಮಸ್ಯೆಗಳ ಕುರಿತು ಹೋರಾಟ ನಡೆಸಲು ಆಗಿರಲಿಲ್ಲ. ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ನಾನು ಬದ್ಧನಾಗಿದ್ದು, ಈ ಗೆಲುವು ಮತ್ತಷ್ಟು ಹೋರಾಟ ನಡೆಸಲು ಸ್ಫೂರ್ತಿ ನೀಡಿದೆ. ಮುಂದೆ ಸಚಿವ ಸ್ಥಾನ ನೀಡುವುದು ಪಕ್ಷದ ಮುಖಂಡರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಹೊರಟ್ಟಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇಷ್ಟು ವರ್ಷ ಜೆಡಿಎಸ್‌ನಲ್ಲಿದ್ದ ಬಸವರಾಜ ಹೊರಟ್ಟಿ, ಇತ್ತೀಚೆಗಷ್ಟೇ ಬಸವರಾಜ ಹೊರಟ್ಟಿ ಅವರ ನಿವಾಸದಲ್ಲಿ ಬಿಜೆಪಿ ಸೇರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!