ಪಿಎಸ್‌ಐ ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ತಕ್ಕ ಪಾಠ: ಗೃಹ ಮಂತ್ರಿ

ದಾವಣಗೆರೆ, ಜೂ.೦೮: ಪಿಎಸ್‌ಐ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಯಾರನ್ನೂ ಬಿಡುವುದಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಡಿವೈಎಸ್ಪಿಯವರನ್ನು ಕೂಡ ಬಂಧಿಸಲಾಗಿದೆ. ಅಲ್ಲದೆ ಸಿಐಡಿಯಿಂದ ಉತ್ತಮ ಟೀಮ್ ವರ್ಕ್ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಪೊಲೀಸ್ ಘಟಕದ ಪರಿವೀಕ್ಷಣಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಕ್ಸಾಮಿನೇಷನ್ ಎಂದರೆ ಇಂತಹ ಭ್ರಷ್ಟಾಚಾರಗಳನ್ನು ಮಾಡಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಇದು ಇಂದಿನದಲ್ಲ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದಕ್ಕೆ ಈಗ ಗೃಹ ಇಲಾಖೆ ಪಾಠ ಹೇಳುತ್ತಿದೆ. ಇಂತಹ ಕೃತ್ಯಕ್ಕೆ ಮುಂದಾಗುವವರು ಎದೆ ಮೇಲೆ ಕೈ ಇಟ್ಟು ನೋಡಿಕೊಳ್ಳುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮ
ಜಿಲ್ಲೆಯಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಒಟ್ಟಾರೆಯಾಗಿ ಎಸ್‌ಪಿ ಮತ್ತು ಐಜಿಯವರ ನೇತೃತ್ವದಲ್ಲಿ ಉತ್ತಮ ಪೊಲೀಸಿಂಗ್ ಇದ್ದು, ಹಿಜಾಬ್ ಒಳಗೊಂಡಂತೆ ಅನೇಕ ವಿವಾದಗಳನ್ನು ಚೆನ್ನಾಗಿ ಮ್ಯಾನೇಜ್ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಔರದ್‌ಕರ್ ವರದಿ ಕೊಟ್ಟ ದಿನದಿಂದ ಈಗಾಗಲೇ ಜಾರಿ ಆಗಿದೆ. ಆದರೆ ಅದಕ್ಕೂ ಮೊದಲಿನವರಿಗೆ ಇದು ಅನ್ವಯವಾಗದೆ ತೊಂದರೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಇದೆ. ಎಲ್ಲ ಇಲಾಖೆಗೆ ಇದು ಅನ್ವಯವಾಗುವುದರಿಂದ ಇದನ್ನು ಹಿಂದಿನಿಂದಲೂ ಅನ್ವಯವಾಗುವಂತೆ ಜಾರಿಗೊಳಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ವೆಚ್ಚ ತಗುಲಲ್ಲಿದ್ದು ಹಣಕಾಸು ಇಲಾಖೆಯೊಂದಿಗೆ ಮಾತುಕತೆ ನಡೆದಿದೆ.

ಹಿಜಾಬ್ ನ್ಯಾಯಾಲಯದ ಸೂಚನೆ ಮೇರೆಗೆ ಕಡ್ಡಾಯವಾಗಿ ನಿರ್ಭಂಧ ಆಗುತ್ತದೆ. ಯಾವ ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಯೂನಿಫಾರಂ ವ್ಯವಸ್ಥೆ ಇದೆಯೋ ಅಲ್ಲಿ ಕಾಲೇಜು ಕಮಿಟಿ, ಪ್ರಿನ್ಸಿಪಾಲರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದಕ್ಕೂ ಮೀರಿ ಲಾ ಅಂಡ್ ಆರ್ಡರ್‌ಗೆ ಧಕ್ಕೆಯಾದಾಗ ಗೃಹ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈಗಂತೂ ಹಿಜಾಬ್ ವಿಚಾರ ಸಾಕಷ್ಟು ತಹಬಂಧಿಗೆ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಐಜಿಪಿ ತ್ಯಾಗರಾಜ್, ಎಸ್‌ಪಿ ಸಿ.ಬಿ. ರಿಷ್ಯಂತ್, ಎಎಸ್‌ಪಿ ರಾಮಗೊಂಡ ಬಸರಗಿ ಇತರರು ಇದ್ದರು.

ವಿದ್ಯಾರ್ಥಿಗಳಲ್ಲದವರೇ ಹೆಚ್ಚು

ನಾವು ಕೂಡ ಹೋರಾಟ ಮಾಡಿಯೇ ಬಂದವರು. ಆದರೆ ಹೋರಾಟ ಯಾವ ರೀತಿಯಲ್ಲಿರಬೇಕು ಎಂಬುದರ ಅರಿವಿರಬೇಕಾಗುತ್ತದೆ. ಶಿಕ್ಷಣ ಸಚಿವರ ಮನೆ ನುಗ್ಗಲಿಕ್ಕೆ ಬಂದವರಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳೇ ಅಲ್ಲ. ಬೆಂಗಳೂರು, ಹಾಸನ, ದಾವಣಗೆರೆ ಹೀಗೆ ಬೇರೆ ಬೇರೆ ಕಡೆಯಿಂದ ಬಂದವರಾಗಿದ್ದು ತಿಪಟೂರಿನ ಓರ್ವ ವ್ಯಕ್ತಿ ಭಾಗಿಯಾಗಿದ್ದಾನೆ. ಪ್ರತಿಭಟನೆಯ ಕುರಿತಾಗಿ ಯಾರಿಂದಲೂ ಒಪ್ಪಿಗೆಯನ್ನೂ ಪಡೆಯದೇ ಏಕಾಏಕಿ ಸಚಿವರ ಮನೆ ನುಗ್ಗಿ ಅಲ್ಲಿದ್ದ ನಿಕ್ಕರ್‌ನ್ನು ತಂದು ಅಂಗಳದಲ್ಲಿ ಬೆಂಕಿ ಹಚ್ಚಿದ್ದಾರೆ. ಕಾನೂನು ಪ್ರಕಾರ ಏನು ಶಿಕ್ಷೆಯಾಗಬೇಕು ಆ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ. ಇಂತಹ ಕೃತ್ಯಗಳನ್ನು ಎಲ್ಲರೂ ಖಂಡಿಸುವ ಅಗತ್ಯವಿದೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

admin

admin

Leave a Reply

Your email address will not be published. Required fields are marked *

error: Content is protected !!