ಪುಲ್ವಾಮಾ ದಾಳಿ ರಾಜಕೀಯ ಪ್ರೇರಿತ – ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪ

ಪ್ರಧಾನಿಯ ರಾಜ್ಯ ಪ್ರವಾಸ ಅಧಿಕಾರದ ಕುರ್ಚಿಗಾಗಿ – ಯೋಗ ನೆಪಮಾತ್ರ . . ?

ಸುದ್ದಿ360 ದಾವಣಗೆರೆ, ಜೂ.20: ೨೦೧೯ರಲ್ಲಿ ನಡೆದ ಪುಲ್ವಾಮಾ ದಾಳಿ ಒಂದು ರಾಜಕೀಯ ಪ್ರೇರಿತ. ಇಲ್ಲವೆಂದಾದರೆ ದಾಳಿಯ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ನೀಡಿರಲಿಲ್ಲವೇ, ನೀಡಿದ್ದರೂ ಅದನ್ನು ಹಗುರವಾಗಿ ಪರಿಗಣಿಸಿದ್ದು ಏಕೆ ..? ಇಂದೂ ಸಹ ಅಧಿಕಾರದ ಕುರ್ಚಿಗಾಗಿ ಯೋಗ ದಿನಾಚರಣೆ ನೆಪದಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಮೂರು ಬಾರಿ ಅತಿವೃಷ್ಠಿ ಬಂದಾಗಲೂ ಮೋದಿ ರಾಜ್ಯಕ್ಕೆ ಭೇಟಿ ನೀಡಲಿಲ್ಲ. ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ಪರಿಹಾರವನ್ನೂ ನೀಡಲಿಲ್ಲ. ಕೋವಿಡ್ ಸಮಯದಲ್ಲೂ ಸುಪ್ರೀಂ ಕೋರ್ಟ್ ಸೂಚನೆಯಂತೆ ಪರಿಹಾರ ನೀಡಲಿಲ್ಲ. ಗುತ್ತಿಗೆದಾರರ ೪೦% ಕಮಿಷನ್ ಆರೋಪಕ್ಕೆ ಉತ್ತರಿಸಲಿಲ್ಲ. ಆದರೆ, ಇದೀಗ ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಧಿಕಾರದ ಕುರ್ಚಿಗಾಗಿ ಯೋಗಾ ನೆಪದಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ದೂರಿದರು.

ಭಾರತೀಯ ಪದ್ಧತಿಯಲ್ಲಿ ಯೋಗ ಅನಾದಿ ಕಾಲದಿಂದಲೂ ಬೇರೂರಿಕೊಂಡು ಬಂದಿದೆ. ಪ್ರಧಾನಿ ಮೋದಿಯವರು ಎಲ್ಲವನ್ನು ಯಾವ ರೀತಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಅವರನ್ನು ನೋಡಿ ಕಲಿಯಬೇಕು. ಮೈಸೂರಿನಲ್ಲಿ ಆಯೋಜಿಸಿರುವ ಯೋಗ ದಿನಾಚರಣೆ ಕಾರ್ಯಕ್ರಮ ಇದಕ್ಕೆ ತಾಜಾ ನಿದರ್ಶನ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು, ರಾಜ್ಯದಲ್ಲಿ ಅಧಿಕಾರ ಪಡೆಯಲು ಯೋಗ ಒಂದು ನೆಪ ಮಾತ್ರ ಎಂದರು.

ಹಿಜಾಬ್, ಹಲಾಲ್ ಕಟ್ ಎಂದು ಹತ್ತಾರು ವಿವಾದಗಳನ್ನು ರಾಜ್ಯ ಬಿಜೆಪಿ ಸರ್ಕಾರ ಸೃಷ್ಟಿಸಿದರೂ ಸಹ ಈ ಬಗ್ಗೆ ರಾಜ್ಯಕ್ಕೆ ಮಾರ್ಗದರ್ಶನವಾಗಲಿ, ಶಾಂತಿಪಾಲನೆ ಬಗ್ಗೆ ಪ್ರಧಾನಿ ಮೋದಿ ತುಟಿ ಬಿಚ್ಚಲಿಲ್ಲ. ಇಂತಹ ಪ್ರಧಾನಿ ಈಗ ಯೋಗದ ಹೆಸರಿನಲ್ಲಿ ರಾಜಕಾರಣ ಮಾಡಲು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇದೆ. ಸಂವಿಧಾನ ಬದ್ಧವಾಗಿ ಪ್ರತಿಭಟಿಸುವ ಹಕ್ಕನ್ನು ದೇಶದ ನಾಗರೀಕರಿಗೆ ಸಂವಿಧಾನ ನೀಡಿದೆ. ಆದರೆ, ಗಲಭೆ ಹೆಸರಿನಲ್ಲಿ ಕೆಲವರನ್ನು ಆರೋಪಿಗಳನ್ನಾಗಿ ಮಾಡಿ ಅವರ ಮನೆಗಳನ್ನು ನೆಲಸಮ ಮಾಡಿದ್ದಾರೆ. ಇವರ ನಡೆಯಿಂದ ಪೊಲೀಸ್, ನ್ಯಾಯಾಲಯ, ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನ ಇವರಿಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದರು.

ಇದೀಗ ಬೆಂಗಳೂರಿಗೆ ಬರುತ್ತಿರುವ ಮೋದಿ, ಸಿದ್ದರಾಮಯ್ಯ ಸ್ಥಾಪಿಸಿದ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಉದ್ಘಾಟನೆಗೆ ಬರುತ್ತಿದ್ದಾರೆ. ಕಾಂಗ್ರೆಸ್ ಮಾಡಿದ ಸಾಧನೆಗಳಿಗೆ ನಾಮಕರಣಕ್ಕೆ ಬರುವ ಬದಲಾಗಿ ತಾವು ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಎಂ.ಜಯಪ್ರಕಾಶ್, ಎಂ.ಕೆ.ಲಿಯಾಖತ್‌ಅಲಿ, ಮಹ್ಮದ್ ಜಿಕ್ರಿಯಾ, ಕೆ.ಎಂ.ಮಂಜುನಾಥ್, ಆರ್.ಬಿ.ಝಡ್ ಭಾಷಾ, ಡಿ. ಶಿವಕುಮಾರ್, ಬಿ.ಹೆಚ್.ಉದಯ್‌ಕುಮಾರ್, ಫಾರುಕ್, ಮುಬಾರಕ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!