ಪೋಷಕರನ್ನು ಬಾಲ್ಯದ ದಿನಕ್ಕೆ ಕರೆದೊಯ್ದ ದಾವಣಗೆರೆ ಪಿಬಿವಿ ವಿದ್ಯಾಲಯ

ಸುದ್ದಿ 360 ದಾವಣಗೆರೆ, ಜ.10: ದಿನಾ ಬೆಳಗೆದ್ದು ಮಕ್ಕಳ ಶಾಲೆಯ ಬ್ಯಾಗ್, ಲಂಚ್ ಬ್ಯಾಗ್, ನೀರು ಬಾಟಲ್, ಕರ್ಚಿಪ್, ಮಾಸ್ಕ್ ಹೀಗೆ ಮಕ್ಕಳನ್ನು ಶಾಲೆಗೆ ಸಜ್ಜುಗೊಳಿಸಿ ಶಾಲಾ ಆವರಣಕ್ಕೆ ತಲುಪಿಸಿ ಉಸ್ಸಪ್ಪ ಇವತ್ತಿನ ಅರ್ಧ ಕೆಲಸ ಮುಗೀತು ಎಂದು ನಿಟ್ಟುಸಿರು ಬಿಡುತ್ತಾ ಮನೆ ಕಡೆಗೆ ತೆರಳುತ್ತಿದ್ದ ಪೋಷಕರ ಈ ದಿನ ಕೊಂಚ ವಿಶೇಷವಾಗಿಯೇ ಇತ್ತು.

ನಗರದ ದೇವರಾಜ ಅರಸು ಬಡಾವಣೆಯ ಬಿ ಬ್ಲಾಕ್ ನಲ್ಲಿರುವ ದೈವಜ್ಞ ವಿದ್ಯಾಸಂಸ್ಥೆ ಪಿಬಿವಿ ವಿದ್ಯಾಲಯದಲ್ಲಿ ಸೋಮವಾರ ಶಾಲಾ ವಿದ್ಯಾರ್ಥಿಗಳ ಪೋಷಕರಿಗಾಗಿ ಹಲವು ಬಗೆಯ ಕ್ರೀಡೆಗಳನ್ನು ಏರ್ಪಡಿಸಿದ್ದರು. ಇದು ಪೋಷಕರನ್ನು ಮರಳಿ ಬಾಲ್ಯದ ದಿನಗಳಿಗೆ ಕೊಂಡೊಯ್ದರೆ, ವಿದ್ಯಾರ್ಥಿ ಸಹಪಾಠಿಗಳು ಅಪ್ಪ ಅಮ್ಮ ಮಕ್ಕಳಂತೆ ಕ್ರೀಡೆಯಲ್ಲಿ ಪಾಲ್ಗೊಂಡು ಸಂಬ್ರಮಿಸಿದ ಕ್ಷಣಗಳನ್ನು ಎಂಜಾಯ್ ಮಾಡಿದರು.

ಶಾಲೆಯಿಂದ ಆಯೋಜಿಸಲಾಗಿದ್ದ ಪೋಷಕರ ಈ ಕ್ರೀಡಾಕೂಟವನ್ನು ಶಾಲೆಯ ಅಧ್ಯಕ್ಷರಾದ ಶಂಕರ್ ಎನ್ ವಿಠಲ್‍ಕರ್ ಅವರು ಉದ್ಘಾಟಿಸಿ ಮಾತನಾಡಿ, ಮಕ್ಕಳು ದೇವರ ಸಮಾನ, ಮಕ್ಕಳ ಭವಿಷ್ಯ ಪೋಷಕರ ಕೈಯಲ್ಲಿದೆ. ಅವರನ್ನು ಸರಿದಾರಿಯಲ್ಲಿ ನಡೆಸುವ ಕರ್ತವ್ಯ ಎಲ್ಲಾ ಪೋಷಕರದ್ದಾಗಿದೆ ಎಂದರು.

ಶಾಲಾವತಿಯಿಂದ ಹಮ್ಮಿಕೊಂಡಿರುವ ಕ್ರೀಡೆಗಳಲ್ಲಿ ಪೋಷಕರು ಭಾಗವಹಿಸುವ ಮೂಲಕ ಮಕ್ಕಳಲ್ಲಿಯೂ ಕ್ರೀಡಾ ಮನೋಭಾವನೆ ಬೆಳೆಯಲು ಸಹಕರಿಸಬೇಕು. ಕ್ರೀಡೆಯಲ್ಲಿ ಭಾಗವಹಿಸಲು ಉತ್ಸಾಹದಿಂದ ಆಗಮಿಸಿರುವ ಎಲ್ಲಾ ಪೋಷಕವೃಂದಕ್ಕೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಮಹಿಳಾ ಪೋಷಕರು ಚೆಂಡನ್ನು ಬಕೆಟ್‍ನಲ್ಲಿ ಹಾಕುವ, ನಟ್‍ಗಳನ್ನು ಒಂದರ ಮೇಲೊಂದರಂತೆ ಜೋಡಿಸುವ ಸ್ಪರ್ಧೆಗಳಲ್ಲಿ ಪಾಲ್ಗೊಂಡರೆ, ಪುರುಷ ಪೋಷಕರು ಚೆಂಡಿನ ಮೂಲಕ ಕಪ್‍್ನ್ನು ಉರುಳಿಸುವ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಪೋಷಕ ದಂಪತಿಗಳಿಗಾಗಿ ಇಬ್ಬರು ಒಂದೊಂದು ಕಾಲಿಗೆ ಜಂಟಿಯಾಗಿ ಕಟ್ಟಿಕೊಂಡು ಓಡುವ, ಮತ್ತು  ಕಪ್ ಸಹಾಯದಿಂದ ಪಿರಮಿಡ್‍ ರಚಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಹೀಗೆ ಉತ್ಸಾಹದಿಂದ  ಭಾಗವಹಿಸಿದ ಪೋಷಕರ ಕ್ರೀಡೆಗಳನ್ನು ಕಣ್ತುಂಬಿಕೊಂಡ ಮಕ್ಕಳು ಪೋಷಕರನ್ನು ಹುರಿದುಂಬಿಸುತ್ತಾ ದಿನವನ್ನು ಎಂಜಾಯ್ ಮಾಡಿದರು.

ಕಾರ್ಯದರ್ಶಿಗಳಾದ ಯೋಗರಾಜ್ ಅಣ್ವೇಕರ್, ಮುಖ್ಯೋಪಾಧ್ಯಾಯರಾದ ಪದ್ಮಾವತಿ ಡಿ. ವರ್ಣೇಕರ್, ಶಾಲೆಯ ಬೋಧಕ ಹಾಗೂ ಬೋಧಕೇತರ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕ್ರೀಡೆಯಲ್ಲಿ ಪಾಲ್ಗೊಂಡ ಪೋಷಕರ ವೀಡಿಯೋ ತುಣುಕುಗಳು. . .

admin

admin

Leave a Reply

Your email address will not be published. Required fields are marked *

error: Content is protected !!